Thursday, March 23, 2023

Latest Posts

ಉಕ್ರೇನ್​ನಲ್ಲಿ ಮೃತಪಟ್ಟ ನವೀನ ಮನೆಗೆ ಡಾ. ಶಿವಮೂರ್ತಿ ಮುರುಘಾ ಶರಣರು ಭೇಟಿ, ಸಾಂತ್ವನ

ಹೊಸ ದಿಗಂತ ವರದಿ, ಹಾವೇರಿ:

ಇತ್ತೀಚೆಗೆ ಉಕ್ರೇನ್‌ದಲ್ಲಿ ರಷ್ಯಾ ನಡೆಸಿದ ಶೆಲ್‌ದಾಳಿಯಲ್ಲಿ ಮೃತಪಟ್ಟಿರುವ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ ಅವರ ನಿವಾಸಕ್ಕೆ ಶನಿವಾರ ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿ ನವೀನ ಅವರ ತಂದೆ, ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಶ್ರೀಮಠದಿಂದ 25 ಸಾವಿರರೂಗಳ ನೆರವು ನೀಡಿದರು.
ನವೀನ ಗ್ಯಾನಗೌಡ್ರ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಂದ್ರಶೇಖರ ಗ್ಯಾನಗೌಡ್ರ-ತಾಯಿ ವಿಜಯಲಕ್ಷ್ಮೀ ಅವರಿಗೆ ಮಗನ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದರು. ಈ ಸಂದರ್ಭದಲ್ಲಿ ನವೀನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಾ. ಶಿವಮೂರ್ತಿ ಮುರುಘಾ ಶರಣರು, ನವೀನ ಅವರ ಸಾವು ಅತ್ಯಂತ ನೋವಿನ ಸಂಗತಿಯಾಗಿದೆ. ನೀವು ಧೈರ್ಯ ತಂದುಕೊಳ್ಳಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಿಮೂಶ ಅವರು, ನವೀನ ಅವರ ಸಾವಿನಿಂದ ಇಡೀ ರಾಷ್ಟ್ರಕ್ಕೆ ದುಃಖವಾಗಿದೆ. ನವೀನ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿಕ್ಕೆ ಬಂದಿರುವೆವು. ಇದು ನಮ್ಮ ಕರ್ತವ್ಯ ಕೂಡಾ, ಸಾಧ್ಯವಾದ ಮಟ್ಟಿಗೆ ಸಾಂತ್ವನ ಹೇಳಿದ್ದೇವೆ. ಇದು ಸಾಂತ್ವನದ ಭೇಟಿ ಎಂದು ಭಾವಿಸಬಹುದು. ಯುದ್ದ ಯಾವತ್ತಿಗೂ ಅನಾರೋಗ್ಯಕರ, ಹಾಗೂ ಹಿಂಸಾತ್ಮಕವಾಗಿರುವಂತದ್ದು, ಯುದ್ಧ ಅದು ಬಹಳಷ್ಟು ಹಿಂಸೆಯನ್ನು ಸೃಷ್ಟಿಸುತ್ತದೆ. ಯುದ್ಧ ತೊಲಗಿ, ಯುದ್ಧ ಕೊನೆಗೊಂಡು ಶಾಂತಿ ನೆಲಸಲಿ, ಜಗತ್ತಿಗೆ ಈಗ ಬೇಕಾಗಿರುವುದು ಶಾಂತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ರಾಣೆಬೆನ್ನೂರು ವಿರಕ್ತಮಠದ ಗುರುಬಸವ ಸ್ವಾಮೀಜಿ, ಗಣ್ಯರಾದ ನಾಗೇಂದ್ರ ಕಟಕೋಳ, ಬಿ.ಎನ್. ಪಾಟೀಲ ಸೇರಿದಂತೆ ಗ್ರಾಮದ ಪ್ರಮುಖರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!