Sunday, March 26, 2023

Latest Posts

ರಾಜ್ಯದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಸಂಕಲ್ಪ: ಸಚಿವ ಬಸವರಾಜ ಭೈರತಿ

ಹೊಸ ದಿಗಂತ ವರದಿ, ಕಲಬುರಗಿ:

ರಾಜ್ಯದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಸಂಕಲ್ಪ ಮಾಡಿದ್ದು, ಇದಕ್ಕಾಗಿ ತಾವು ಸಚಿವರಾಗಿ ಅಧಿಕಾರ ವಹಿಸಿದ ಮೇಲೆ‌ 1000 ಕೋಟಿ ರೂ. ಅನುದಾನ ಕುಡಿಯುವ ನೀರಿಗೆ ಖರ್ಚು ಮಾಡಲಾಗಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಭೈರತಿ ಅವರು ಹೇಳಿದರು.

ಶನಿವಾರ ಅಫಜಲಪುರದ ಪಟ್ಟಣದ ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಅಫಜಲಪುರ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಅಫಜಲಪುರ ಪಟ್ಟಣಕ್ಕೆ ಭೀಮಾ ನದಿ (ಸೊನ್ನಾ ಬ್ಯಾರೇಜ್) ಯಿಂದ 66.54 ಕೋಟಿ ರೂ. ವೆಚ್ಚದಲ್ಲಿ ಒದಗಿಸುವ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ‌ ನೆರವೇರಿಸಿ ಅವರು ಮಾತನಾಡಿದರು.

ಪಕ್ಷಕಿಂತ ಅಭಿವೃದ್ಧಿ ಮುಖ್ಯ. ಇದಕ್ಕಾಗಿ ಅಫಜಲಪೂರ ಪಟ್ಟಣದಲ್ಲಿ ಬಹುದಿನದ ಬೇಡಿಕೆಯಾದ 66.54 ಕೋಟಿ ರೂ. ಮೊತ್ತದ ಕುಡಿಯುವ ‌ನೀರು ಯೋಜನೆಗೆ ಇಂದು ಚಾಲನೆ ನೀಡಿದ್ದೇವೆ. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 703 ಕೋಟಿ ರು. ವೆಚ್ಚದ 24*7 ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಯಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ 150 ಕೋಟಿ ರೂ. ನೀಡಿದ್ದೇನೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಅನೇಕ ಕುಡಿಯುವ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ಪೌರ ಸಂಸ್ಥೆಗಳಿಗೆ 3874 ಕೋಟಿ ರೂ. ಮಂಜೂರು

ರಾಜ್ಯದ ಸಣ್ಣ ಮತ್ತು‌ ಮಧ್ಯಮ ಪಟ್ಟಣಗಳ ಅಭಿವೃದ್ದಿಗೆ ಮುಖ್ಯಮಂತ್ರಿಗಳ ‌ನಗರೋತ್ಥಾನ ಯೋಜನೆಯಡಿ 3874 ಕೋಟಿ ರೂ. ಮಂಜೂರು ಮಾಡಿದ್ದು, ಪಟ್ಟಣಗಳಲ್ಲಿ ಅಭಿವೃದ್ಧಿಯ ಪರ್ವ ಮುಂದಿನ ದಿನದಲ್ಲಿ‌ ಕಾಣಬಹುದಾಗಿದೆ ಎಂದು ಸಚಿವ‌ ಭೈರತಿ ಬಸವರಾಜ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹಾಗೂ ಶಾಸಕ ಎಂ.ವೈ.ಪಾಟೀಲ್ ಮಾತನಾಡಿದರು.

ಅಫಜಲಪೂರದ ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ಷ.ಬ್ರ.ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಡಾ. ಬಿ.ಜಿ.ಪಾಟೀಲ, ಅಫಜಲಪುರ ಪುರಸಭೆ ಅಧ್ಯಕ್ಷೆ ರೇಣುಕಾ ರಾಜು ಪಾಟೀಲ, ಉಪಾಧ್ಯಕ್ಷೆ ಕಮಲಾ ತಿಪ್ಪಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣಕುಮಾರ ಪಾಟೀಲ, ಶಿವರಾಜ ಪಾಟೀಲ ರದ್ದೆವಾಡಗಿ, ಮತೀನ್ ಪಟೇಲ್, ಕೆ.ಯು.ಡಬ್ಲ್ಯೂ.ಎಸ್.ಡಿ.ಬಿ ಕಾರ್ಯಪಾಲಕ ಅಭಿಯಂತ ಹೆಚ್.ಎ. ಪ್ರಭಣ್ಣವರ, ಅಫಜಲಪುರ ಪುರಸಭೆಯ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಎಇಇ ಹೆಚ್.ಎನ್.ದೇಸಾಯಿ ಸೇರಿದಂತೆ‌ ಪುರಸಭೆ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.

ಕೆ.ಯು.ಡಬ್ಲ್ಯೂ.ಎಸ್.ಡಿ.ಬಿ ಕಲಬುರಗಿ ವಲಯದ ಮುಖ್ಯ ಅಭಿಯಂತ ಎಸ್.ಎಸ್. ರಾಜಗೋಪಾಲ ಅವರು ಸ್ವಾಗತಿಸಿ ಯೋಜನೆ ಬಗ್ಗೆ ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!