Tuesday, October 3, 2023

Latest Posts

ಹುಬ್ಬಳ್ಳಿಯಲ್ಲಿ ಹೊಸದಿಗಂತ ನೂತನ ಕಚೇರಿ ಉದ್ಘಾಟನೆ: ಪತ್ರಿಕೆಯ ಕಾರ್ಯ ವೈಖರಿಗೆ ಗಣ್ಯರಿಂದ ಶ್ಲಾಘನೆ

ಹೊಸದಿಗಂತ ವರದಿ,ಹುಬ್ಬಳ್ಳಿ:

ಕಳೆದ ನಾಲ್ಕು ದಶಕಗಳ ಕಾಲ ಹೊಸದಿಗಂತ ವೈಚಾರಿಕ ಪತ್ರಿಕೆಯಾಗಿ ಗಟ್ಟಿಯಾಗಿ ನಿಂತಿದೆ. ಅನೇಕ ಪತ್ರಿಕೆಗಳಿಗೆ ಹೋಲಿಸಿದರೆ, ಹೊಸದಿಗಂತ ಸಮಾಜಕ್ಕೆ ವೈಚಾರಿಕ ದಿಕ್ಕು ತೋರುವ ವಿಭಿನ್ನ ಪತ್ರಿಕೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕರಾದ ಅರವಿಂದರಾವ ದೇಶಪಾಂಡೆ ಹೇಳಿದರು.

ಇಲ್ಲಿಯ ಕೇಶ್ವಾಪುರದ (ಎಸ್ಬಿಐ ಮುಖ್ಯ ಶಾಖೆ) ಹತ್ತಿರದ ಹೊಸದಿಗಂತ ದಿನ ಪತ್ರಿಕೆ ನೂತನ ಸ್ವಂತ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ರಂಗದಲ್ಲಿ ಅನೇಕ ಬದಲಾವಣೆ ಬಂದರೂ ಸಹ ಯಾವುದೇ ಮುಲಾಜಿಲ್ಲದೇ, ಹಿಂದುತ್ವ, ರಾಷ್ಟ್ರೀಯತೆ, ಭಾರತೀಯತೆ, ಸಂಸ್ಕೃತಿ,ಸಂಸ್ಕಾರ, ಉತ್ತಮ ವಿಚಾರ ಓದುಗರಿಗೆ ನೀಡುತ್ತಿದೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ವ್ಯಾಪಾರೀಕರಣಕ್ಕೆ ಒಳಗಾಗದೆ, ವೈಚಾರಿಕ ವಿಚಾರಗಳನ್ನು ನಿಷ್ಠೆ, ನೈತಿಕತೆ, ಶ್ರದ್ಧೆ, ಶುದ್ಧತೆಯಿಂದ ನಡೆಯುವ ಪತ್ರಿಕೆ ಹೊಸದಿಗಂತ ಎಂದು ಶ್ಲಾಘೀಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ನಿತ್ಯ ಸಮಾಜದ ಜಾಗೃತಿ ಹಾಗೂ ಒಳಿತಿಗಾಗಿ ಹೊಸದಿಗಂತ ಕಾರ್ಯನಿರ್ವಹಿಸುತ್ತಿದೆ. ಈಗಿನ ಪೀಳಿಗೆಯವರೂ ಇತಿಹಾಸ ಓದಿಲ್ಲ. ಅವರಿಗೆ ನಮ್ಮ ವೈಚಾರಿಕ ಹಿನ್ನಲೆ ತಿಳಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪತ್ರಿಕೆ ಕೆಲಸ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅನೇಕ ಪತ್ರಿಕೆಗಳಲ್ಲಿ ಪರ-ವಿರೋಧ ಬರೆದರೂ ಸಹಿತ ನಮ್ಮ ವಿಚಾರ ಹಾಗೂ ವೈಚಾರಿಕವಾಗಿ ವಿರೋಧ ಮಾಡುವಂತ ಪರಿಸ್ಥಿತಿ ಉಳಿದಿಲ್ಲ. ಉಳಿದರೂ ಅದಕ್ಕೆ ಬೆಂಬಲ ಇಲ್ಲ. ಹಾಗಾಗಿ ನಮ್ಮ ವೈಚಾರಿಕ ಪತ್ರಿಕೆ ಎಂಬ ವಿಷಯ ಬಂದಾಗ ಇದರ ಅವಶ್ಯಕತೆ ಆ ಸಮಯದಲ್ಲಿ ಎಷ್ಟಿತ್ತು ಎಂಬುದು ಮಹತ್ವದಾಗಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಸ್ತು ನಿಷ್ಠೆ, ನಿರ್ಭಿಡೆಯಿಂದ ಸತ್ಯ ಹೇಳುವ ಪತ್ರಿಕೆಗಳಿಗೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕರಾಳದಿನ ಬರುವ ಸಾಧ್ಯತೆಯಿದ್ದು, ಇದಕ್ಕೆಲ್ಲ ಸಿಡಿದೆದ್ದು, ಮೆಟ್ಟಿನಿಲ್ಲುವ ಕೆಲಸ ಪತ್ರಿಕೆಗಳು ಮಾಡಬೇಕು ಎಂದರು.

ಅಂದಾಗ ಪ್ರಜಾಪ್ರಭುತ್ವ, ಸತ್ಯ, ರಾಷ್ಟ್ರೀಯತೆ ಉಳಿಯಲು ಸಾಧ್ಯ. ಇಂತಹ ಮಾತು ಹೇಳಲು ಇಂದಿನ ಹೊಸದಿಗಂತ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಸೂಕ್ತವಾಗಿದೆ ಎಂದು ತಿಳಿಸಿದರು.

ತುರ್ತು ಪರಿಸ್ಥಿಯ ಕರಾಳ ದಿನಗಳ ಸಂದರ್ಭದಲ್ಲಿ ಹೊಸದಿಗಂತ ಪತ್ರಿಕೆ ಹೊರಹೊಮ್ಮಿ, ವೈಚಾರಿಕತೆ ಹಾಗೂ ದೇಶಾಭಿಮಾನದ ಧ್ಯೇಯ, ಗುರಿಯೊಂದಿಗೆ ನಿರಂತರವಾಗಿ ಹೊರ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜ್ಞಾನಭಾರತಿ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ನಿರ್ಮಲಕುಮಾರ ಸುರಾಣ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಭಾರತಿ ಪ್ರಕಾಶನ ಮುಖ್ಯ ಕಾರ್ಯನಿರ್ವಹಣಾಕಾರಿ ಪಿ.ಎಸ್.ಪ್ರಕಾಶ ಪ್ರಾಸ್ತಾಪವಿಕವಾಗಿ ಮಾತನಾಡಿದರು. ಸಮೂಹ ಸಂಪಾದಕ ವಿನಾಯಕ್ ಭಟ್ ಸ್ವಾಗತಿಸಿದರು. ಹುಬ್ಬಳ್ಳಿ ಆವೃತ್ತಿಯ ಶಾಖಾ ವ್ಯವಸ್ಥಾಪಕ ವಿಠಲ್ದಾಸ ಕಾಮತ್ ನಿರೂಪಿಸಿದರು. ಜಾಹೀರಾತು ವಿಭಾಗದ ವ್ಯಸ್ಥಾಪಕ ಸತೀಶ ಮುತಗಿ ವಂದಿಸಿದರು. ವರ್ಷಿಣಿ ಶೆಟ್ಟಿ ಪ್ರಾರ್ಥಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!