ಫೆಬ್ರವರಿಯಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ: ಅಪ್ಪಚ್ಚುರಂಜನ್

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆ ಕಟ್ಟಡ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಲಿದೆ ಎನ್ನುವ ವಿಶ್ವಾಸವನ್ನು ಇದೇ ಸಂದರ್ಭ ಅವರು ವ್ಯಕ್ತಪಡಿಸಿದರು. ನಗರದಲ್ಲಿ ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮಡಿಕೇರಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗಿದೆ. ಇದಕ್ಕೆ ಸಂಬಂಧ ಪಟ್ಟ ಕಡತಗಳನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದಿರುವುದಾಗಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

ಏರ್ ಸ್ಟ್ರೈಪ್ ನಿರ್ಮಾಣ: ಮುಂಬರುವ ದಿನಗಳಲ್ಲಿ ಕುಶಾಲನಗರ ಬಳಿಯ ಕೂಡಿಗೆಯ ಸೈನಿಕ ಶಾಲೆಯ ಬಳಿ ‘ಏರ್ ಸ್ಟ್ರೈಪ್’ ನಿರ್ಮಾಣ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಇರುವುದಾಗಿ ಶಾಸಕರು ತಿಳಿಸಿದರು.
ಕಾಡಾನೆ ಹಾವಳಿ ನಿಯಂತ್ರಣ: ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆದಾಗ, ಜಿಲ್ಲೆಯಲ್ಲಿ ತೇಗ, ಮ್ಯಾಂಜಿಯಂನಂತಹ ಏಕರೂಪದ ಮರಗಳ ಅರಣ್ಯ ಇದ್ದು, ಅಲ್ಲಿ ಅಗತ್ಯ ಆಹಾರದ ಕೊರತೆಯಿಂದ ಕಾಡಾನೆಗಳ ಉಪಟಳ ಗ್ರಾಮಿಣ ಭಾಗಗಳಲ್ಲಿ ಕಂಡು ಬರುತ್ತಿದೆ. ಈ ಹಿಂದಿನಿಂದಲೂ ತಾನು ಪ್ರಾಯೋಗಿಕವಾಗಿ 2 ಸಾವಿರ ಎಕರೆಯಷ್ಟು ತೇಗದ ಅರಣ್ಯದಲ್ಲಿ ಹಲಸು, ಬಿದಿರು ಸೇರಿದಂತೆ ವನ್ಯ ಜೀವಿಗಳಿಗೆ ಆಹಾರ ಒದಗಿಸುವ ಸಸ್ಯ ಸಂಪತ್ತನ್ನು ಅಭಿವೃದ್ಧಿಪಡಿಸಿದಲ್ಲಿ ಕಾಡಾನೆಗಳ ಹಾವಳಿ ಇರುವುದಿಲ್ಲವೆಂದು ಸಲಹೆ ನೀಡುತ್ತಾ ಬಂದಿದ್ದೇನಾದರೂ, ಆ ಬಗ್ಗೆ ಅರಣ್ಯ ಇಲಾಖೆ ಆಸಕ್ತವಾಗಿಲ್ಲವೆಂದು ಬೇಸರ ವ್ಯಕಪಡಿಸಿದರು.

100 ಕೋಟಿ ರೂ.ಅನುದಾನ: ಪ್ರಸ್ತುತ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸೋಲಾರ್, ಕಂದಕಗಳನ್ನು ನಿರ್ಮಿಸಲಾಗುತ್ತಿದೆ. ಇದೀಗ ರೈಲ್ವೆ ಕಂಬಿಗಳ ಬೇಲಿ ಅಳವಡಿಕೆಯೂ ನಡೆಯುತ್ತಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ 100 ಕೋಟಿ ರೂ.ಗಳ ವಿಶೇಷ ಅನುದಾವನ್ನು ಒದಗಿಸಲಾಗಿದ್ದು, ಇದರ ಮೂಲಕ ಕಂದಕ, ರೈಲ್ವೆ ಹಳಿಗಳ ಬೇಲಿ ನಿರ್ಮಾಣವಾಗಲಿದ್ದು, ಮಂದಿನ ಎರಡು ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬರುವ ವಿಶ್ವಾಸ ವಕ್ತಪಡಿಸಿದರು.

ಸಿ ಮತ್ತು ಡಿ ಜಾಗ ಹಿಂದಕ್ಕೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದ 2 ಸಾವಿರ ಹೆಕ್ಟೇರ್ ಸಿ ಮತ್ತು ಡಿ ಭೂಮಿಯನ್ನು ಹಿಂದಕ್ಕೆ ಪಡೆಯುವ ಕೆಲಸವಾಗಿದ್ದು, ಲಭ್ಯ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕಾರ್ಯ ನಡೆಯಲಿದೆ. ಸಾಕಷ್ಟು ಮಂದಿ ರಸ್ತೆ ಬದಿಗಳಲ್ಲೇ ನಿವೇಶನ ಬೇಕೆನ್ನುವ ಬೇಡಿಕೆ ಇಟ್ಟಲ್ಲಿ ಅದನ್ನು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಈಗಾಗಲೆ ಜಿಲ್ಲಾಧಿಕಾರಿಗಳು ನಿವೇಶನಗಳನ್ನು ಒದಗಿಸಲು 110 ಎಕರೆ ಸರ್ಕಾರಿ ಪೈಸಾರಿ ಜಾಗವನ್ನು ಗುರುತು ಮಾಡಿರುವುದಾಗಿ ತಿಳಿಸಿದರು.

ಮಾಜಿ ಸೈನಿಕರಿಗೆ ನಿವೇಶನ: ಮಾಜಿ ಸೈನಿಕರ ನಿವೇಶನದ ಬೇಡಿಕೆಯನ್ನು ಪ್ರಸ್ತಾಪಿಸಿದಾಗ ಶಾಸಕರು, ಸರ್ಕಾರ ಮಾಜಿ ಸೈನಿಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಈಗಾಗಲೆ ನೀಡಿದೆ. ಅಗತ್ಯ ಜಾಗ ಮತ್ತು ನಿವೇಶನ ಇರುವವರು ನಿವೇಶನ ಪಡೆಯಲು ಮುಂದಾದಲ್ಲಿ ಅದನ್ನು ಕೊಡುವುದು ಕಷ್ಟವೆಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರಿಗೆ 300 ಕೋಟಿ: ಕೇಂದ್ರ ಸರ್ಕಾರ ಈ ಬಾರಿ ಪ್ರತಿ ನಾಗರಿಕನಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬಾಬು ಜಗಜೀವನ ರಾಂ ಕುಡಿಯುವ ನೀರಿನ ಯೋಜನೆಯಡಿ 300 ಕೋಟಿ ರೂ.ಗಳನ್ನು ಕೊಡಗಿಗೆ ಒದಗಿಸಿದೆ. ಇದರ ಮೂಲಕ ಪ್ರತಿ ಗ್ರಾಪಂ ಸಾಕಷ್ಟು ಅನುದಾನವನ್ನು ಪಡೆಯಲಿದ್ದು, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರಕಿಸುವ ಪ್ರಯತ್ನ ನಡೆಯಲಿದೆಯೆಂದು ಹೇಳಿದರು.

ಪ್ರವಾಸೋದ್ಯಮದಿಂದ ಉದ್ಯೋಗ: ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸಾಕಷ್ಟು ಮಂದಿಗೆ ಉದ್ಯೋಗಾವಕಾಶಗಳು ದೊರಕುತ್ತಿದ್ದು, ಬದುಕಿನ ಮಟ್ಟವೂ ಉತ್ತಮವಾಗಿದೆ. ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರವಾಸಿ ಸ್ಥಳಗಳ ಸಮಗ್ರ ಮಾಹಿತಿ ಒದಗಿಸುವ ‘ಔಟ್ ಲೆಟ್’ ಆರಂಭಿಸುವ ಉದ್ದೇಶವಿದೆಯೆಂದು ತಿಳಿಸಿ ಅಪ್ಪಚ್ಚುರಂಜನ್, ಪ್ರವಾಸೋದ್ಯಮದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯೂ ಗಂಭೀರವಾಗಿದ್ದು, ಈ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆಯೆಂದರು.

5 ವರ್ಷ 2 ಸಾವಿರ ಕೋಟಿ ಅನುದಾನ: ಕೊಡಗು ಜಿಲ್ಲೆಗೆ ಕಳೆದ ಐದು ವರ್ಷಗಳ ಅವಧಿಯಲ್ಲಿ 2 ಸಾವಿರ ಕೋಟಿ ಅನುದಾನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗಿದೆ. ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆಯೆಂದು ಶಾಸಕ ಅಪ್ಪಚ್ಚು ರಂಜನ್ ಇದೇ ಸಂದರ್ಭ ತಿಳಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, 1994 ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗೆಹರಿಕೆಗೆ ಪ್ರಯತ್ನಗಳನ್ನು ಮಾಡಿದ್ದಾರೆಂದು ಅಭಿಪ್ರಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!