ಹೊಸದಿಗಂತ ವರದಿ ಮಂಗಳೂರು:
ಸಂಸ್ಕೃತ ಭಾರತಿಯ ಉಡುಪಿ ಕಾರ್ಯಾಲಯ ‘ಅಕ್ಷಯಂ’ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರವರ ಅಮೃತ ಹಸ್ತದಲ್ಲಿ ಲೋಕಾರ್ಪಣೆಗೊಂಡಿದೆ.
ಈ ಸಂದರ್ಭ ಮಾತನಾಡಿದ ಅವರು, ಚಿನ್ನದ ಬಿಸ್ಕತ್ತನ್ನು ಧರಿಸಲು ಆಗುವುದಿಲ್ಲ, ಅದನ್ನು ಆಭರಣವನ್ನಾಗಿ ಮಾಡಿದರೆ ಮಾತ್ರ ಧರಿಸಲು ಸಾಧ್ಯ ಹಾಗೆಯೇ ಭಾಷೆಗಳಲ್ಲಿಯೂ ಅತಿ ಸಂಸ್ಕಾರಗೊಂಡ ಭಾಷೆ ಎಂದರೆ ಸಂಸ್ಕೃತ. ವಿದ್ವಾಂಸರ ನಿಕಷಕ್ಕೆ ಹೋಗಿ ಬಗ್ಗಿ,ತಗ್ಗಿ ತನ್ನನ್ನು ತಾನು ಸರಿ ಎನಿಸಿಕೊಂಡ ಭಾಷೆ ಸಂಸ್ಕೃತ. ಇದನ್ನು ಭಾರತೀಯರಾದ ನಾವು ಕಲಿಯಲೇಬೇಕು, ಇದರಲ್ಲಿರುವ ಜ್ಞಾನ ಭಂಡಾರವನ್ನು ತಿಳಿಯಲೇಬೇಕು ಎಂದು ಹೇಳಿದರು.
ಸಂಸ್ಕೃತ ಭಾರತೀಯ ಅಖಿಲ ಭಾರತ ಸಂಘಟನ ಮಂತ್ರಿ ದಿನೇಶ್ ಕಾಮತ್, ಗುರುಪ್ರಸಾದ್ ಭಟ್, ಸುಪರ್ಣ ಭಟ್, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ವಿಜಯ ಬಲ್ಲಾಳ ರವರು, ಸಂಸ್ಕೃತ ಭಾರತೀ ಜಿಲ್ಲಾ ಉಪಾಧ್ಯಕ್ಷರಾದ ಸುಧಾ ಶಣೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ದಾ.ಮ. ರವೀಂದ್ರ ಸಭೆಯಲ್ಲಿ ಉಪಸ್ಥಿತರಿದ್ದರು.