ಹೊಸದಿಗಂತ ವರದಿ,ಮಂಡ್ಯ :
ನಾಗಮಂಗಲ ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ಜೊತೆಗೆ ಹೇಮಾವತಿ ಜಲಾಶಯದ ನೀರು ಹರಿದುಬರುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ತಾಲೂಕಿನ ಅಣೆಚನ್ನಾಪುರ ಗ್ರಾಮದ ಕೆರೆಯು ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಹೆಚ್ಚುವರಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಬೈಕ್ ಸವಾರ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಅಣೆಚನ್ನಾಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ತಾಲೂಕಿನ ಕಂಬದಹಳ್ಳಿ ಗ್ರಾಮದ ಮಾಯಣ್ಣಗೌಡರ ಮಗ ಕೆ.ಎಂ.ರಾಮಚಂದ್ರೇಗೌಡ(67) ಎಂಬುವರೇ ರಸ್ತೆಯಲ್ಲಿ ಹರಿಯುತ್ತಿದ್ದ ಭಾರಿ ಪ್ರಮಾಣದ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ದುರ್ದೈವಿ. ಸ್ವಗ್ರಾಮ ಕಂಬದಹಳ್ಳಿಯಿಂದ ಕಾರ್ಯನಿಮಿತ್ತ ಬೆಳ್ಳೂರು ಕಡೆಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.