ಗೃಹಲಕ್ಷ್ಮೀ ಯೋಜನೆಯ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ

ಹೊಸದಿಗಂತ ವರದಿ,ದಾವಣಗೆರೆ :

ಗೃಹಲಕ್ಷ್ಮೀ ಯೋಜನೆಯ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಹತ್ಯೆ ಮಾಡಿ, ಅದನ್ನು ಆಕಸ್ಮಿಕ ಸಾವು ಎಂಬುದಾಗಿ ನಂಬಿಸಲು ಯತ್ನಿಸಿದ ಆರೋಪಿ ಪತಿ ಹಾಗೂ ಕುಟುಂಬ ಸದಸ್ಯರು ತಲೆಮರೆಸಿಕೊಂಡ ಘಟನೆ ಜಗಳೂರು ತಾಲೂಕು ಉಜ್ಜಪ್ಪ ವಡೇರಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸತ್ಯಮ್ಮ(40 ವರ್ಷ) ಕೊಲೆಯಾದ ಮಹಿಳೆ. ಮದ್ಯವ್ಯಸನಿಯಾಗಿದ್ದ ಆಕೆಯ ಪತಿ ಅಣ್ಣಪ್ಪ ಹಣಕ್ಕಾಗಿ ನಿತ್ಯವೂ ಸತ್ಯಮ್ಮಳಿಗೆ ಪೀಡಿಸುತ್ತಿದ್ದ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಎರಡು ಸಲ ಸತ್ಯಮ್ಮ ಮತ್ತು ಆಕೆಯ ತವರು ಮನೆಯವರ ಸಮ್ಮುಖದಲ್ಲೇ ಪೊಲೀಸರು ಅಣ್ಣಪ್ಪಗೆ ಬುದ್ಧಿ ಹೇಳಿ ರಾಜಿ ಮಾಡಿ ಕಳಿಸಿದ್ದರು. ಆದರೂ ಕುಡಿತದ ದಾಸನಾಗಿದ್ದ ಅಣ್ಣಪ್ಪ ನಿತ್ಯವೂ ಕುಡಿಯಲು ಹಣ ಕೊಡುವಂತೆ ಸತ್ಯಮ್ಮಳಿಗೆ ಪೀಡಿಸುತ್ತಲೇ ಇದ್ದನು. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಬಿಡಿಸಿಕೊಡುವಂತೆ ಆಕೆಗೆ ಒತ್ತಡ ಹೇರುತ್ತಿದ್ದನು. ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಬರುವುದನ್ನೇ ಕಾದು, ಯುಪಿಐ ಮೂಲಕ ತಾನೇ ಹಣವನ್ನು ಕಳಿಸಿಕೊಂಡು, ಅದೇ ಹಣದಲ್ಲಿ ಮದ್ಯ ಸೇವಿಸುತ್ತಿದ್ದ ಎಂದು ಮೃತಳ ಬಂಧುಗಳು ಆರೋಪಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಹಣ ಬಿಡಿಸಿಕೊಡುವಂತೆ ಸತ್ಯಮ್ಮಗೆ ಪತಿ ಅಣ್ಣಪ್ಪ ತೊಂದರೆ ಕೊಟ್ಟು, ಹಲ್ಲೆ ಮಾಡಿದ್ದಾನೆ. ಆದರೆ, ಸತ್ಯಮ್ಮ ಹಣ ಕೊಡದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯನ್ನು ಮುಚ್ಚಿ ಹಾಕಲು ಆಕೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾಳೆಂದು ಕಥೆ ಕಟ್ಟಿದ್ದನು. ಮೃತ ಸತ್ಯಮ್ಮಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಕಳಿಸಲಾಗಿತ್ತು. ಮೃತಳ ಕುಟುಂಬಸ್ಥರು ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣಪ್ಪ ಮತ್ತು ಆತನ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!