ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿವಿಧ ಭಾಗಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ, ರಾಗಿಂಗ್, ತಾರತಮ್ಯದಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾಲೇಜು, ವಿಶ್ವವಿದ್ಯಾಲಯ ಮತ್ತು ದೇಶದ ಯಾವುದೇ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಲು ಟಾಸ್ಕ್ ಫೋರ್ಸ್ ರಚಿಸಲು ದೇಶದ ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಯಾವುದೇ ವಿದ್ಯಾರ್ಥಿಗೆ ಕಾಲೇಜು-ವಿಶ್ವವಿದ್ಯಾಲಯದಲ್ಲಿ ಓದುವುದರ ಜೊತೆಗೆ ಸುರಕ್ಷಿತವಾಗಿರುವ ಹಕ್ಕಿದೆ. ಅವರ ಈ ಹಕ್ಕನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಅನ್ನು ರಚಿಸಿದೆ. ಈ ಟಾಸ್ಕ್ ಫೋರ್ಸ್ ಇನ್ನು ಮುಂದೆ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲಿಯವರೆಗೆ ಎಷ್ಟು ಲೈಂಗಿಕ ಕಿರುಕುಳ, ರಾಗಿಂಗ್ ಮತ್ತು ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಎಂಬುದರ ಬಗ್ಗೆ ನಾಲ್ಕು ತಿಂಗಳೊಳಗೆ ಟಾಸ್ಕ್ ಫೋರ್ಸ್ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
2023 ರಲ್ಲಿ ಐಐಟಿ ದೆಹಲಿಯ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ಈ ಘಟನೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು.
2023 ರ ಘಟನೆಯ ತನಿಖೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಅದರ ನಂತರವೂ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.
ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ವಿದ್ಯಾರ್ಥಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾದರೆ ಮತ್ತು ಆ ವಿದ್ಯಾರ್ಥಿಯ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದರೆ, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.