ಬಾಲ್ಯದ ಹಂತದಿoದಲೇ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಿ: ಸುಮಂಗಲ

ಹೊಸದಿಗಂತ ವರದಿ,ಮೈಸೂರು:

ಬಾಲ್ಯದ ಹಂತದಿoದಲೇ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಪೋಷಕರು ಬೆಳೆಸಿ, ಆಮೌಲ್ಯಗಳನ್ನು ಮಕ್ಕಳು ರೂಢಿಸಿಕೊಂಡು ಅನುಸರಿಸುವಂತೆ ಮಾಡಬೇಕು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕಿ ವಿ. ಸುಮಂಗಲ ತಿಳಿಸಿದರು.

ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ವತಿಯಿಂದ ನಗರದ ಕಲಾಮಂದಿರದಲ್ಲಿ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮೌಲ್ಯಗಳು ನಶಿಸುತ್ತಿವೆ. ಇದಕ್ಕೆ ಕಾರಣ ಮಕ್ಕಳಲ್ಲಿ ಪೋಷಕರು ಜೀವನ ಮೌಲ್ಯಗಳನ್ನು ಬೆಳೆಸದಿರುವುದು.

ನಮ್ಮ ಹಿರಿಯರು ರೂಪಿಸಿದ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಜೀವನವನ್ನು ನಾವುಗಳು ಇಂದು ಮರೆಯುತ್ತಿದ್ದೇವೆ. ಕೇವಲ ಪಠ್ಯಪುಸ್ತಕದಿಂದ ಮಾತ್ರ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಲು ಸಾಧ್ಯವಿಲ್ಲ. ನಮ್ಮ ಜೀವನವೇ ಅವರಿಗೆ ಒಂದು ಆದರ್ಶವಾಗಬೇಕು. ನಮ್ಮ ಆದರ್ಶದ ಬದುಕನ್ನು ನೋಡಿ ಮಕ್ಕಳು ಬೆಳೆಯಬೇಕು. ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸದೆ ಹೋದರೆ ಮುಂದೆ ಪಾಲಕರಿಗೆ ವೃದ್ಧಾಪ್ಯ ಆವರಿಸಿದಾಗ ಅವರ ಯೋಗಕ್ಷೇಮವನ್ನು ಮಕ್ಕಳು ನೋಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಕಾರ್ಯ ಆಗಬೇಕು ಎಂದು ಹೇಳಿದರು. ಸಾವಿರಾರು ವರ್ಷಗಳಿಂದ ಹಿರಿಯರು ಉಳಿಸಿಕೊಂಡು ಬಂದಿರುವ ಮೌಲ್ಯ,ಆದರ್ಶಗಳು ದಾರಿದೀಪವಾಗಬೇಕು. ಶರಣರು ಹೇಳಿದ ವಚನಗಳನ್ನು ಮಕ್ಕಳಿಗೆ ಕಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೆಳೆಯುವ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ಕೆ ಪಾಲಕರು ಮುಂದಾಗಬೇಕು. ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿದಷ್ಟು ಉತ್ತಮ ನಾಯಕತ್ವ,ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಮಹಾ ಮಾನವತಾವಾದಿ ಬಸವಣ್ಣನವರ ಚಿಂತನೆಗಳು ಇಂದಿಗೂ, ಎಂದಿಗೂ ಪ್ರಸ್ತುತವಾಗಿವೆ. ಜಗತ್ತಿನಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ ಬಸವಣ್ಣನವರ ತತ್ವ ಆದರ್ಶಗಳು, ಜೀವನ ಮೌಲ್ಯಗಳು ಜಗತ್ತಿಗೆ ಅವಶ್ಯಕವಾಗಿದೆ. ವಚನಗಳಲ್ಲಿರುವ ಮೌಲ್ಯಗಳನ್ನು ಎಲ್ಲರು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ವಾಣ ಸಾಧ್ಯವಿದೆ. ಹೀಗಾಗಿ ಮಕ್ಕಳಿಗೆ ವಚನಗಳನ್ನು ಓದಿಸುವ ಪರಿಪಾಠವನ್ನು ಪಾಲಕರು ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳನ್ನು ಸಾಹಿತ್ಯದ ಗಂಧ ಗಾಳಿ ಇಲ್ಲದೆ ಬೆಳೆಸುತ್ತಿದ್ದೇವೆ. ನಮ್ಮ ಮಕ್ಕಳು ಉತ್ತಮ ಅಂಕ ಗಳಿಸಬೇಕು, ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ವಿದೇಶದಲ್ಲಿ ನೆಲಸಬೇಕು ಎಂಬ ಮನಸ್ಥಿತಿಯನ್ನು ಬಹುಪಾಲು ಪಾಲಕರು ಹೊಂದಿದ್ದಾರೆಯೇ ಹೊರತು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಪಾಲಕರ ಆದ್ಯತೆ ಆಗುತ್ತಿಲ್ಲ. ಬಾಲ್ಯದಿಂದಲೇ ಮಕ್ಕಳಿಗೆ ಸುಸಂಸ್ಕೃತ ವಾತಾವರಣ ದೊರೆಯುವಂತೆ ಮಾಡಬೇಕು. ಸಾಹಿತ್ಯ, ಸಂಗೀತ, ಲಲಿತಕಲೆಗಳ ಗಂಧ ಗಾಳಿ ಮಗುವಿಗೆ ಬೀಸಿದಾಗ ವಾತ್ರ ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮಹಿಳೆಯರಿಗೆ ಇದೀಗ ಶೇ.33 ರಾಜಕೀಯ ಮೀಸಲಾತಿ ದೊರೆತ್ತಿದೆ. ಆದರೆ ಬಸವಣ್ಣ 12ನೇ ಶತಮಾನದಲ್ಲೇ ಮಹಿಳೆಯರಿಗೆ ಸಮಾನ ಅವಕಾಶಗಳು ನೀಡಿದ್ದರು. ಇಂದಿಗೂ ಬಸವಣ್ಣನವರು ಪ್ರತಿಪಾದಿಸಿದ ಬಸವ ಧರ್ಮ ಪ್ರಸ್ತುತವಾಗಿದೆ ಎಂದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ನಗರದ ವಿವಿಧ ಜೆಎಸ್‌ಎಸ್ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಪೋಷಕರು,ಸಭಿಕರ ಗಮನ ಸೆಳೆಯಿತು. ಅಪೇಕ್ಷ ಜಿ. ದೇವನೂರು, ಸಾನ್ವಿ ಕೆ. ಉಡುಪ ಮತ್ತು ಚಿನ್ಮಯಿ ಅವರಿಂದ ಭರತನಾಟ್ಯ, ಅರುಣೋದಯ ವಿಶೇಷ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೆಪಿ ನಗರದ ಅರಿವಿನ ಮನೆ ಬಳಗದಿಂದ ನೃತ್ಯ, ಜೆಎಸ್‌ಎಸ್ ಬಡಾವಣೆಯ ಲಲಿತಾದ್ರಿ ಮಹಿಳಾ ವೇದಿಕೆಯಿಂದ ಕೋಲಾಟ, ಒಕ್ಕೂಟದ ಮಹಿಳೆಯರು ಹಾಗೂ ಮಕ್ಕಳಿಂದ ವೀರಗಾಸೆ ಮತ್ತು ಕಥಾಮೃತ ಪ್ರೇಕ್ಷಕರ ಗಮನ ಸೆಳೆಯಿತು. ಸುತ್ತೂರುಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿದರು. ವೇದಿಕೆಯಲ್ಲಿ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಲಿಂಗರಾಜು , ಪದಾಧಿಕಾರಿಗಳು, ಮತ್ತಿತರರು ಹಾಜರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!