ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟಿನ ಹಿನ್ನೆಲೆ ದೆಹಲಿ ಜಲ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದು, ಮೂರನೇ ದಿನವೂ ತಮ್ಮ ಮುಷ್ಕರ ಮುಂದುವರೆಸಿದ್ದಾರೆ.
ಇದೀಗ ಅತಿಶಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟ ಮತ್ತಷ್ಟು ಕುಸಿದಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಸಚಿವೆ ಅತಿಶಿ ಅವರ ಕೀಟೋನ್ ಮಟ್ಟವು ಧನಾತ್ಮಕವಾಗಿ ಕ್ಷಿಣಿಸಿದ ಹಿನ್ನೆಲೆ ವೈದ್ಯರು ಅವರಿಗೆ ಈ ಮುಷ್ಕರವನ್ನು ಕೂಡಲೇ ಕೊನೆಗೊಳಿಸಲು ಸಲಹೆ ನೀಡಿದ್ದಾರೆ ಎಂದು ಎಎಪಿ ಮಾಹಿತಿ ಹಂಚಿಕೊಂಡಿದೆ.
‘ಉಪವಾಸದ ಮೂರನೇ ದಿನದಂದು, ಜಲ ಸಚಿವೆ ಆದ ಅತಿಶಿ ಅವರ ಕೀಟೋನ್ ಮಟ್ಟವು ಕುಸಿತ ಕಂಡಿದೆ. ವೈದ್ಯರು ಶೀಘ್ರವೇ ಇದನ್ನೆಲ್ಲಾ ಅಂತ್ಯಗೊಳಿಸಲು ಸಲಹೆ ನೀಡಿದ್ದಾರೆ. ಅವರ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವೂ ಕುಸಿದಿದೆ’ ಎಂದು ಎಎಪಿ ಸಂಜಯ್ ಸಿಂಗ್ ಹೇಳಿದ್ದಾರೆ.
‘ಅತಿಶಿ ತಮ್ಮ ಜೀವವನ್ನು ಪಣಕ್ಕಿಟ್ಟಾದರೂ ನೀರಿನ ಹಕ್ಕಿಗಾಗಿ ಹೋರಾಡುತ್ತಿದ್ದಾರೆ’ ಎಂದು ಸಂಜಯ್ ಸಿಂಗ್ ಸಚಿವೆಯ ಪ್ರತಿಭಟನಾ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕುಡಿಯುವ ನೀರಿನ ಪೂರೈಕೆಗಾಗಿ ದೆಹಲಿಯು ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಅವಲಂಬಿಸುವಂತಾಗಿದೆ. ನಮ್ಮ ಜನಕ್ಕೆ ನೀರಿನ ಪೂರೈಕೆ ಮಾಡಿಕೊಡಿ ಎಂದು ಆಗ್ರಹಿಸಿ, ಶುಕ್ರವಾರ ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ಅತಿಶಿ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ.