ಏಷ್ಯಾಕಪ್​ ಫೈನಲ್ ಗೆದ್ದು ಸಂಭ್ರಮಿಸಿದ ಭಾರತ ‘ಎ’ ಮಹಿಳಾ ತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡತಿ ಶ್ರೇಯಾಂಕ ಪಾಟೀಲ್ ಬೌಲಿಂಗ್ , ಕನಿಕಾ ಅಹುಜಾ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಉದಯೋನ್ಮುಖ ಏಷ್ಯಾಕಪ್​ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ‘ಎ’ ತಂಡದ ವಿರುದ್ದ ಭಾರತ ‘ಎ’ ಮಹಿಳಾ ತಂಡವು 31 ರನ್‌ ಅಂತರದ ಭರ್ಜರಿ ಜಯ ಸಾಧಿಸಿದೆ.

ಹಾಂಗ್‌ ಕಾಕ್‌ ಸಮೀಪದ ಮಿಷನ್‌ ರೋಡ್ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿದ್ದೂ, ಭಾರತ ತಂಡದ ಪರ ಅಗ್ರಕ್ರಮಾಂಕದಲ್ಲಿ ನಾಯಕಿ ಶ್ವೇತಾ ಶೆರಾವತ್ 13 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಉಮಾ ಚೆಟ್ರಿ 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 22 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವ್ರಿಂದ ದಿನೇಶ್‌ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ವ್ರಿಂದ 29 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 36 ರನ್‌ ಗಳಿಸಿ ಮಿಂಚಿದರು. ಅಂತಿಮವಾಗಿ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್‌ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಆರಂಭದಲ್ಲೇ ದಿಲ್ಹಾರ ಅಖ್ತರ್(5) ಬಲಿ ಪಡೆಯುವಲ್ಲಿ ಮನ್ನತ್ ಕಶ್ಯಪ್ ಯಶಸ್ವಿಯಾದರು. ಇನ್ನು ಸತಿ ರಾಣಾ ಕೂಡಾ(13) ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಮನ್ನತ್ ಕಶ್ಯಪ್ ಅವಕಾಶ ನೀಡಲಿಲ್ಲ.  ಇನ್ನು ಕನಿಕಾ ಅಹುಜಾ ಕೂಡಾ ಮಾರಕ ದಾಳಿ ನಡೆಸಿದರು. ಮನ್ನತ್ ಕಶ್ಯಪ್‌ 20 ರನ್ ನೀಡಿ 3 ವಿಕೆಟ್ ಪಡೆದರೆ, ಕನ್ನಡತಿ ಶ್ರೇಯಾಂಕ ಪಾಟೀಲ್‌ ಕೇವಲ 13 ರನ್‌ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ತಂಡವನ್ನು 96 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸುವಲ್ಲಿ ಯಶಸ್ವಿಯಾದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!