ಏಳು ಒಪ್ಪಂದಗಳಿಗೆ ಭಾರತ- ಬಾಂಗ್ಲಾ ಸಹಿ: ವಿರೋಧಿ ಶಕ್ತಿಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದ ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇಂದು ಪ್ರಧಾನಿ ಮೋದಿ ಸಮ್ಮುಖದಲ್ಲಿ ಏಳು ಒಪ್ಪಂದಗಳಿಗೆ ಸಹಿ ಹಾಕಿದರು.

ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಮಾತುಕತೆಯಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಪ್ರಧಾನಿ ನರೇಂದ್ರ ಮತ್ತು ಪ್ರಧಾನಿ ಶೇಖ್ ಹಸೀನಾ ನೇತೃತ್ವದಲ್ಲಿ ಮಾತುಕತೆಯಲ್ಲಿ ಸಂಪರ್ಕ, ಇಂಧನ, ಜಲ ಸಂಪನ್ಮೂಲಗಳು, ವ್ಯಾಪಾರ ಮತ್ತು ಹೂಡಿಕೆ, ಗಡಿ ನಿರ್ವಹಣೆ ಮತ್ತು ಭದ್ರತೆ, ಅಭಿವೃದ್ಧಿ ಪಾಲುದಾರಿಕೆ ಮತ್ತು ಪ್ರಾದೇಶಿಕ ಹಾಗೂ ಬಹುಪಕ್ಷೀಯ ವಿಷಯಗಳಿಗೆ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಎರಡು ರಾಷ್ಟ್ರಗಳು, ಭಯೋತ್ಪಾದನೆಯ ವಿಷಯದ ಬಗ್ಗೆ ಚರ್ಚಿಸಲಾಯಿತು ಮತ್ತು ವಿರೋಧಿ ಶಕ್ತಿಗಳನ್ನು ಎದುರಿಸಲು ಒತ್ತು ನೀಡಲಾಯಿತು. ವಿರೋಧಿ ಶಕ್ತಿಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರವಾಹ ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ವಿಸ್ತರಿಸಿದ್ದೇವೆ. ಬಾಂಗ್ಲಾದೇಶದೊಂದಿಗೆ ಪ್ರವಾಹದ ಬಗ್ಗೆ ಸೂಕ್ತವಾದ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇಂದು ಬಾಂಗ್ಲಾದೇಶವು ಭಾರತದ ಅತಿದೊಡ್ಡ ಅಭಿವೃದ್ಧಿ ಹಾಗೂ ವ್ಯಾಪಾರ ಪಾಲುದಾರ ರಾಷ್ಟ್ರ ಅಲ್ಲದೇ, ಜನರ ಸಹಕಾರದಿಂದ ನಿರಂತರ ಸುಧಾರಣೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಪರಸ್ಪರ ಸಹಕಾರ ಹೆಚ್ಚಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ನಾನು ವಿವಿಧ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಜಾಗತಿಕ ವಿದ್ಯಮಾನಗಳಿಂದ ನಾವು ಪಾಠಗಳನ್ನು ಕಲಿಯಬೇಕಿದೆ ಮತ್ತು ನಮ್ಮ ಆರ್ಥಿಕತೆ ಬಲಪಡಿಸಬೇಕು ಎಂದು ಮೋದಿ ಉಲ್ಲೇಖಿಸಿದ್ದಾರೆ.

ಬಳಿಕ ಮಾತನಾಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಭಾರತವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಿಮಿತ್ತ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ನಾನು ಭಾರತ ಸರ್ಕಾರ ಮತ್ತು ನನ್ನ ಭಾರತೀಯ ಸ್ನೇಹಿತರನ್ನು ಅಭಿನಂದಿಸಲು ಬಯಸುತ್ತೇನೆ. ಇಂದು ಪ್ರಧಾನಿ ಮೋದಿ ಮತ್ತು ನಾನು ಮತ್ತೊಂದು ಸುತ್ತಿನ ಫಲಪ್ರದ ಚರ್ಚೆ ಪೂರ್ಣಗೊಳಿಸಿದ್ದೇವೆ. ಅದರ ಫಲಿತಾಂಶವು ಎರಡೂ ದೇಶಗಳ ಜನರಿಗೆ ಪ್ರಯೋಜನವಾಗಲಿದೆ. ನಾವು ನಿಕಟ ಸ್ನೇಹ ಮತ್ತು ಸಹಕಾರದಿಂದ ಸಭೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!