ಮಹಿಳೆಯರ ಗೌರವ ಹೆಚ್ಚಿದರೆ ಮಾತ್ರ ಭಾರತ ಮುನ್ನಡೆಯಲು ಸಾಧ್ಯ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಇಂದು ‘ಮಹಿಳೆಯರ ಆರ್ಥಿಕ ಸಬಲೀಕರಣ’ ಕುರಿತು
ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಭಾರತವು ಮಹಿಳೆಯರ ಗೌರವವನ್ನು ಹೆಚ್ಚಿಸಿದರೆ ಮಾತ್ರ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.

ಇಂದು ಮಹಿಳೆಯರ ಆರ್ಥಿಕ ಸಬಲೀಕರಣದ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಪ್ರಗತಿಯ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸುವಲ್ಲಿ ನಾರಿ ಶಕ್ತಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದ್ದು, ಈಗ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ ಎಂದರು.

ಮಹಿಳೆಯರಿಗಾಗಿ ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಈ ವರ್ಷದ ಬಜೆಟ್ ಮಹಿಳಾ ನೇತೃತ್ವದ ಅಭಿವೃದ್ಧಿಯ ದಿಕ್ಕಿನಲ್ಲಿ ತೆಗೆದುಕೊಂಡ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆಂದರು.

ಈ ಬಾರಿಯ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 80 ಸಾವಿರ ಕೋಟಿ ರೂ. ಈ ಯೋಜನೆಯಡಿ ಇಲ್ಲಿಯವರೆಗೆ ಮೂರು ಕೋಟಿ ಮನೆಗಳನ್ನು ನಿರ್ಮಿಸಲಾಗಿದ್ದು, ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿವೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಮನೆಯ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರಿಗೆ ಹೊಸ ಧ್ವನಿಯನ್ನು ನೀಡಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಮಹಿಳೆಯರಿಗೆ ಶೇಕಡಾ 7.5 ಬಡ್ಡಿದರ ಸಿಗಲಿದೆ ಎಂದು ಅವರು ಹೇಳಿದರು.

ಮಹಿಳೆಯರ ಕೌಶಲ್ಯ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ವಿಶ್ವಕರ್ಮ ಯೋಜನೆಯು ಈ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅದರ ಅವಕಾಶಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದರು.

ಸ್ವಸಹಾಯ ಗುಂಪುಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯನ್ನು ಎತ್ತಿ ಹಿಡಿದ ಮೋದಿ, ಕಳೆದ ಒಂಬತ್ತು ವರ್ಷಗಳಲ್ಲಿ ಏಳು ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಸೇರಿದ್ದಾರೆ. ಈ ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಆರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದಿವೆ ಎಂದು ಮಾಹಿತಿ ನೀಡಿದರು.

ಶ್ರೀ ಅನ್ನದ ಪ್ರಚಾರದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಪಾತ್ರದ ಕುರಿತು ಪ್ರಧಾನಮಂತ್ರಿ ಅವರು, ಶ್ರೀ ಅನ್ನದಲ್ಲಿ ಸಾಂಪ್ರದಾಯಿಕ ಅನುಭವ ಹೊಂದಿರುವ ಒಂದು ಕೋಟಿಗೂ ಹೆಚ್ಚು ಬುಡಕಟ್ಟು ಮಹಿಳೆಯರು ಈ ಸ್ವಸಹಾಯ ಗುಂಪುಗಳ ಭಾಗವಾಗಿದ್ದಾರೆ. ಈ ಮಹಿಳೆಯರು ಕೇವಲ ಸಣ್ಣ ಉದ್ಯಮಿಗಳಾಗಿ ಮಾತ್ರವಲ್ಲದೆ ಸಮರ್ಥ ಸಂಪನ್ಮೂಲ ವ್ಯಕ್ತಿಗಳಾಗಿಯೂ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ಗಮನಸೆಳೆದಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿದ ಮೋದಿ, ಮುಂಬರುವ ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿವಿಧೋದ್ದೇಶ ಸಹಕಾರ ಸಂಘಗಳು, ಡೈರಿ ಸಹಕಾರಿ ಸಂಘಗಳು ಮತ್ತು ಮೀನುಗಾರಿಕಾ ಸಹಕಾರಿ ಸಂಘಗಳು ರಚನೆಯಾಗಲಿವೆ. ಒಂದು ಕೋಟಿ ರೈತರನ್ನು ನೈಸರ್ಗಿಕ ಕೃಷಿಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಲಾಗಿದೆ ಮತ್ತು ಈ ಉಪಕ್ರಮದಲ್ಲಿ ಮಹಿಳಾ ರೈತರು ದೊಡ್ಡ ಪಾತ್ರವನ್ನು ವಹಿಸಬಹುದು ಎಂದು ಅವರು ಹೇಳಿದರು.

ದೇಶವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಎಂಬ ಮನೋಭಾವದಿಂದ ಸಾಗುತ್ತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಮಹಿಳೆಯರ ಬಗ್ಗೆ ಗೌರವದ ಮಟ್ಟವನ್ನು ಹೆಚ್ಚಿಸುವ ಮೂಲಕ ಮತ್ತು ಸಮಾನತೆಯ ಭಾವನೆಯನ್ನು ತರುವ ಮೂಲಕ ಮಾತ್ರ ಭಾರತವು ಮುನ್ನಡೆಯಲು ಸಾಧ್ಯ. ಮಹಿಳೆಯರು ಸಶಸ್ತ್ರ ಪಡೆಗಳನ್ನು ಸೇರಿಕೊಂಡು ರಫೇಲ್ ಅನ್ನು ಹಾರಿಸಿದಾಗ, ಅದು ಅವರ ಬಗ್ಗೆ ಜನರ ಮನಸ್ಥಿತಿಯಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಅವರು ಹೇಳಿದರು.

ನಾಗಾಲ್ಯಾಂಡ್ ನಲ್ಲಿ ಇಬ್ಬರು ಮಹಿಳಾ ಶಾಸಕರು ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದೇ ತಿಂಗಳ 8 ರಂದು ಮಹಿಳಾ ದಿನಾಚರಣೆಯಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರೆದ ಲೇಖನವನ್ನು ಉಲ್ಲೇಖಿಸಿದ ಮೋದಿ, ರಾಷ್ಟ್ರಪತಿಗಳು ಮಹಿಳಾ ಸಬಲೀಕರಣದ ಬಗ್ಗೆ ಬಹಳ ಭಾವೋದ್ರಿಕ್ತ ಲೇಖನವನ್ನು ಬರೆದಿದ್ದಾರೆ ಮತ್ತು ರಾಷ್ಟ್ರಪತಿಗಳು ಇದನ್ನು ಬರೆದಿರುವ ಮನೋಭಾವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಹೆಣ್ಣುಮಕ್ಕಳು ಮತ್ತು ಮಹಿಳೆಯರ ದಾರಿಯಲ್ಲಿ ಬರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುವ ಸಂಕಲ್ಪದೊಂದಿಗೆ ಜನರು ಮುನ್ನಡೆಯಬೇಕೆಂದು ಅವರು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!