ಚೀನಾ-ಭಾರತ ಸೈನಿಕರ ಘರ್ಷಣೆ ಕುರಿತು ಸಂಸತ್‌ನಲ್ಲಿ ಸಚಿವ ರಾಜನಾಥ್ ಸಿಂಗ್‌ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಸಂಸತ್‌ನಲ್ಲಿ ಮಾಹಿತಿ ನೀಡಿದರು. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಇದೇ 9ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಚೀನಾ ಸೈನಿಕರು ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುವ ವೇಳೆ ನಮ್ಮ ಸೈನಿಕರು ಅವರ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿದ್ದಾರೆ.

ಈ ಘರ್ಷಣೆಯಲ್ಲಿ ನಮ್ಮ ಸೈನಿಕರು ಯಾರೂ ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂಬ ಮಾಹಿತಿ ನೀಡಿದರು.  ಭಾರತೀಯ ಸೈನಿಕರು ಧೈರ್ಯ ಮತ್ತು ಶೌರ್ಯವನ್ನು ತೋರಿದ್ದಾರೆ ಈ ವಿಚಾರದಲ್ಲಿ ಸೇನೆಯಲ್ಲಿ ಅಭಿನಂದಿಸಬೇಕು. ಚೀನಾದ ಷಡ್ಯಂತ್ರಕ್ಕೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಭಾರತೀಯ ಸೇನಾ ಕಮಾಂಡರ್‌ಗಳು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿ ಚೀನಾದೊಂದಿಗೆ ಮಾತುಕತೆ ನಡೆಸಿದ್ದರಿಂದ ಚೀನಾ ಸೈನಿಕರು ವಾಪಸಾದರು ಎಂಬುದಾಗಿ ತಿಳಿಸಿದರು.

ಆದರೆ, ಇವೆಲ್ಲದರ ನಡುವೆ ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಉತ್ತರ ನೀಡುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಇಂದು ಕಾಂಗ್ರೆಸ್ ಸಂಸದ ಸೈಯದ್ ನಜೀರ್ ಹುಸೇನ್ ರಾಜ್ಯಸಭೆಯಲ್ಲಿ ನಿಯಮ 176ರ ಅಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವಿನ ಘರ್ಷಣೆ ಕುರಿತು ಅಲ್ಪಾವಧಿ ಚರ್ಚೆಗೆ ನೋಟಿಸ್ ನೀಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!