ಕೆನಡಾದ ಭಗವದ್ಗೀತಾ ಪಾರ್ಕ್‌ ಧ್ವಂಸ: ಆರೋಪಿಗಳ ಮೇಲೆ ತ್ವರಿತ ಕ್ರಮಕ್ಕೆ ಒತ್ತಾಯಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆನಡಾದ ಬ್ರಾಂಪ್ಟನ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಲಾಗಿದ್ದ ‘ಶ್ರೀ ಭಗವದ್ಗೀತೆ’ ಎಂಬ ಉದ್ಯಾನವನದಲ್ಲಿ ದುಷ್ಕರ್ಮಿಗಳಿಂದ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಬಲವಾಗಿ ಖಂಡಿಸಿದೆ ಮತ್ತು ದ್ವೇಷದ ಅಪರಾಧವೆಸಗಿರುವ ಆರೋಪಿಗಳ ವಿರುದ್ಧ ತನಿಖೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಕೆನಡಾಕ್ಕೆ ಒತ್ತಾಯಿಸಿದೆ.
ಈ ಹಿಂದೆ ಟ್ರಾಯರ್ಸ್ ಪಾರ್ಕ್ ಎಂದು ಕರೆಯಲ್ಪಡುತ್ತಿದ್ದ ಈ ಉದ್ಯಾನವನವನ್ನು ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಿ ಸೆಪ್ಟೆಂಬರ್ 28 ರಂದು ಅನಾವರಣಗೊಳಿಸಲಾಗಿತ್ತು.
“ಬ್ರಾಂಪ್ಟನ್‌ನಲ್ಲಿರುವ ಶ್ರೀ ಭಗವದ್ಗೀತಾ ಪಾರ್ಕ್‌ನಲ್ಲಿ ನಡೆದ ದ್ವೇಷದ ಅಪರಾಧವನ್ನು ನಾವು ಖಂಡಿಸುತ್ತೇವೆ. ಕೆನಡಾದ ಅಧಿಕಾರಿಗಳು ಮತ್ತು ಪೊಲೀಸರು ಶೀಘ್ರ ತನಿಖೆ ನಡೆಸಿ ಅಪರಾಧಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತೇವೆ” ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.
ಕೆನಡಾದಲ್ಲಿ ದೇವಾಲಯವೊಂದನ್ನು ಧ್ವಂಸಗೊಳಿಸಿದ ಕೆಲವೇ ದಿನಗಳ ನಂತರ ಈ ದಾಳಿ ನಡೆದಿದೆ.
ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಭಾನುವಾರ ಉದ್ಯಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ದೃಢಪಡಿಸಿದ್ದು, ಕೆನಡಾವು ಇಂತಹ ದಾಳಿಗಳಿಗೆ “ಶೂನ್ಯ ಸಹಿಷ್ಣುತೆ” ಪ್ರದರ್ಶಿಸುತ್ತದೆ ಎಂದು ದಾಳಿಕೋರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 15 ರಂದು ಕೆನಡಾದ ಪ್ರಮುಖ ಹಿಂದೂ ದೇವಾಲಯವಾದ ಸ್ವಾಮಿನಾರಾಯಣ ಮಂದಿರವನ್ನು ʼಕೆನಡಿಯನ್ ಖಲಿಸ್ತಾನಿ ಉಗ್ರಗಾಮಿಗಳುʼ ಭಾರತ ವಿರೋಧಿ ಗೀಚುಬರಹದ ಮೂಲಕ ವಿರೂಪಗೊಳಿಸಿದರು.
ಕಳೆದ ತಿಂಗಳು, ಭಾರತವು ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಹೆಚ್ಚುತ್ತಿರುವ ದ್ವೇಷದ ಅಪರಾಧಗಳ ಬಗ್ಗೆ ಎಚ್ಚರಿಕೆ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!