October 7, 2026
Wednesday, October 7, 2026
spot_img

‘ಮೋದಿ ಜನಪರ ಆಡಳಿತದಿಂದ ಭಾರತ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ’: ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ ಬೆಳಗಾವಿ:

ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ 24×7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಜನಪರ ಆಡಳಿತದ ಫಲವಾಗಿ ಭಾರತ ಜಾಗತಿಕ ಮಟ್ಟದಲ್ಲಿ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಆರ್ಥಿಕತೆಯಲ್ಲಿ ದೇಶ ನಾಲ್ಕನೇ ಸ್ಥಾನಕ್ಕೇರಿರುವುದು ಹೆಮ್ಮೆಯ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸೇವಾ ಸಂಕಲ್ಪ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಆಡಳಿತದಿಂದ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ. ಜಮ್ಮು-ಕಾಶ್ಮೀರದಲ್ಲಿ ನಕ್ಸಲ್ ಹಾವಳಿ ನಿರ್ಮೂಲನೆಯಾಗಿ ಶಾಂತಿ ನೆಲೆಸಿದ್ದು, ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ದೇಶಕ್ಕೆ ಒಂದೂ ದಿನ ಆಡಳಿತ ನೀಡದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದುರುದ್ದೇಶದಿಂದ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಟೀಕಿಸಲು ಕಾಂಗ್ರೆಸ್ ಬಳಿ ಯಾವುದೇ ವಿಷಯವಿಲ್ಲದ ಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಶೆಟ್ಟರ್ ದೂರಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ವಿಕಸಿತ ಭಾರತ ನಿರ್ಮಾಣದ ಪ್ರಧಾನಿ ಮೋದಿ ಅವರ ಕನಸನ್ನು ನನಸಾಗಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಸಂಕಲ್ಪ ಮಾಡಬೇಕು. ತಳಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ, ಮೋದಿ ಅವರ ಸಂದೇಶಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಸಂಶಯಾಸ್ಪದ ಮತದಾರರ ಕುರಿತು ಮಾಹಿತಿ ನೀಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೆಲ ಪೊಲೀಸ್ ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಎಸ್ಐಆರ್ ವಿಷಯದಲ್ಲಿ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾರಿಗೂ ಹೆದರಬಾರದು ಎಂದು ಕರೆ ನೀಡಿದರು.

ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ಹಿಂದೆ ಭಾರತವನ್ನು ಬಡ ರಾಷ್ಟ್ರವೆಂದು ನೋಡುತ್ತಿದ್ದ ಜಗತ್ತು ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಭಾರತದ ಕುರಿತ ವಿಶ್ವದ ದೃಷ್ಟಿಕೋನ ಬದಲಾಗಲು ಮೋದಿ ನಾಯಕತ್ವವೇ ಕಾರಣ ಎಂದರು.

ಬೆಳಗಾವಿಯಿಂದ ವಿವಿಧ ಕ್ಷೇತ್ರಗಳಿಗೆ ತೆರಳುವ ಜ್ಯೋತಿ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದ ಅವರು, ಕಾರ್ಯಕರ್ತರು ಮನೆಮನೆಗೆ ತೆರಳಿ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.

ಇದನ್ನೂ ಓದಿ:

ಈ ವೇಳೆ  ಶಾಸಕ ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ, ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ, ಶಾಸಕ ಅಭಯ್ ಪಾಟೀಲ, ಗೀತಾ ಸುತಾರ, ಎಂ.ಬಿ. ಜರಳಿ, ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Must Read