May 16, 2026
Saturday, May 16, 2026
spot_img

ಜಾಗತಿಕ ತೈಲ ಬಿಕ್ಕಟ್ಟಿನಲ್ಲೂ ಭಾರತದಲ್ಲಿ ಕನಿಷ್ಠ ಬೆಲೆ ಏರಿಕೆ: ಅಂಕಿ-ಅಂಶ ಬಿಚ್ಚಿಟ್ಟ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಹಾಗೂ ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದರೂ, ಭಾರತ ಸರ್ಕಾರ ಇಂಧನ ದರವನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ನಿಯಂತ್ರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 3 ರೂ. ಏರಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ವಿರೋಧ ಪಕ್ಷಗಳಿಗೆ ಸಚಿವರು ಅಂಕಿ-ಅಂಶಗಳ ಸಮೇತ ಸೂಕ್ತ ತಿರುಗೇಟು ನೀಡಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ ಇಂಧನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ನಾಗರಿಕರ ಹಿತದೃಷ್ಟಿಯಿಂದ ಇತ್ತೀಚೆಗಷ್ಟೇ ಅಬಕಾರಿ ಸುಂಕವನ್ನು 10 ರೂ. ಕಡಿತಗೊಳಿಸಿತ್ತು. ಪ್ರಸ್ತುತ ಜಾಗತಿಕವಾಗಿ ವಿವಿಧ ರಾಷ್ಟ್ರಗಳಲ್ಲಿ ತೈಲ ಬೆಲೆ ಶೇ. 20 ರಿಂದ 45 ರಷ್ಟು ಏರಿಕೆಯಾಗಿದ್ದರೆ, ಭಾರತದಲ್ಲಿ ಕೇವಲ ಶೇ. 3.2 ರಷ್ಟು ಮಾತ್ರ ಹೆಚ್ಚಳ ಮಾಡಲಾಗಿದೆ.

ವಿಶ್ವದ ಪ್ರಮುಖ ದೇಶಗಳ ತೈಲ ದರ ಏರಿಕೆಯ ಪಟ್ಟಿ ಇಲ್ಲಿದೆ:

ಯುಎಸ್ಎ: +44.5%

ಶ್ರೀಲಂಕಾ: +38.2%

ಯುನೈಟೆಡ್ ಕಿಂಗ್ಡಮ್: +19.2%

ಜರ್ಮನಿ: +13.7%

ಭಾರತ: +3.2%

ಜಾಗತಿಕ ಇಂಧನ ಬಿಕ್ಕಟ್ಟಿನ ವಾಸ್ತವ ಪರಿಸ್ಥಿತಿ ತಿಳಿದಿದ್ದರೂ ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಚಿವರು ಕಿಡಿಕಾರಿದ್ದಾರೆ. ಜಾಗತಿಕ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲದಿದ್ದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಎರಡು ಬಾರಿ ಇಂಧನ ತೆರಿಗೆ ಹೆಚ್ಚಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರವು ಜೂನ್ 2024 ರಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ. 25.92 ರಿಂದ ಶೇ. 29.84 ಕ್ಕೆ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ. 14.34 ರಿಂದ ಶೇ. 18.44 ಕ್ಕೆ ಹೆಚ್ಚಿಸಿ, ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡಿತ್ತು. ತದನಂತರ ಏಪ್ರಿಲ್ 2025 ರಲ್ಲಿ ಮತ್ತೆ ಡೀಸೆಲ್ ವ್ಯಾಟ್ ಅನ್ನು ಶೇ. 21.17 ಕ್ಕೆ ಏರಿಸುವ ಮೂಲಕ ಕೇವಲ 10 ತಿಂಗಳ ಅವಧಿಯಲ್ಲಿ ಒಟ್ಟಾರೆ 5 ರೂ. ಹೆಚ್ಚಳ ಮಾಡಿ ನಾಗರಿಕರಿಗೆ ಹೊರೆಯಾಗಿಸಿದೆ ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !