ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಆತಿಥ್ಯ ವಹಿಸಲಿರುವ ಜಾಗತಿಕ ಜಾವೆಲಿನ್ ಸ್ಪರ್ಧೆಯ ನೇತೃತ್ವವನ್ನು ಒಲಿಂಪಿಕ್ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರು ವಹಿಸಲಿದ್ದಾರೆ ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಮಂಗಳವಾರ ಪ್ರಕಟಿಸಿದೆ.
ಭಾರತದಲ್ಲಿ ಜಾವೆಲಿನ್ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ವಿಶ್ವದ ಅಗ್ರ 10 ಜಾವೆಲಿನ್ ಎಸೆತಗಾರರು ಸ್ಪರ್ಧಿಸಲಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆಹ್ವಾನ ಪಂದ್ಯಾವಳಿಯಾಗಿದೆ ಎಂದು ಎಎಫ್ಐ ಮುಖ್ಯಸ್ಥರಾಗಿ 12 ವರ್ಷಗಳ ಅಧಿಕಾರಾವಧಿ ಮಂಗಳವಾರ ಕೊನೆಗೊಂಡ ಸುಮರಿವಾಲಾ ಎಎಫ್ಐ ವಾರ್ಷಿಕ ಸಾಮಾನ್ಯ ಸಭೆಯ (AGM) ಮೊದಲ ದಿನದಂದು ಹೇಳಿದರು.
ನೀರಜ್ ಚೋಪ್ರಾ ಅಲ್ಲಿರಲಿದ್ದಾರೆ. ಅವರು ಈವೆಂಟ್ ಅನ್ನು ಆಯೋಜಿಸುತ್ತಿರುವ ತಂಡದ ಭಾಗವಾಗಿದ್ದಾರೆ, ಜೆಎಸ್ಡಬ್ಲ್ಯೂ, ವಿದೇಶಿ ಸಂಸ್ಥೆ ಮತ್ತು ಎಎಫ್ಐ ಒಟ್ಟಾಗಿ ಈ ಸ್ಪರ್ಧೆಯನ್ನ ರಚಿಸುತ್ತಿವೆ.
ಚೋಪ್ರಾ ಟೋಕಿಯೊ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದ ಆಗಸ್ಟ್ 7ನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಿಸುತ್ತಿರುವುದರಿಂದ ಇದು ತುಂಬಾ ಆಸಕ್ತಿದಾಯಕವಾಗಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಸುಮರಿವಾಲಾ ತಿಳಿಸಿದರು.
ಜೊತೆಗೆ 2029ರ ವಿಶ್ವ ಚಾಂಪಿಯನ್ಶಿಪ್ ಹಾಗೂ 2027ರ ವಿಶ್ವ ರಿಲೇಗಳ ಆತಿಥ್ಯ ವಹಿಸಲು ಭಾರತ ಆಸಕ್ತಿ ವ್ಯಕ್ತಪಡಿಸಿದೆ ಎಂದು ಎಎಫ್ಐ ಅಧ್ಯಕ್ಷ ಅಡಿಲ್ಲೆ ಸುಮರಿವಾಲಾ ಖಚಿತಪಡಿಸಿದ್ದಾರೆ.
2028ರ ವಿಶ್ವ ಜೂನಿಯರ್ ಚಾಂಪಿಯಶಿಪ್ ಗೆ ಆತಿಥ್ಯ ವಹಿಸಲು ಎಎಫ್ಐ ಈಗಾಗಲೇ ಆಸಕ್ತಿ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥ ಸೆಬಾಸ್ಟಿಯನ್ ಕೋ ಕಳೆದ ನವೆಂಬರ್ನಲ್ಲಿ ದೇಶಕ್ಕೆ ಭೇಟಿ ನೀಡಿದ್ದರು.