ಭಾರತ ಬರೀತಿದೆ ವಜ್ರ ವಹಿವಾಟಿನ ಹೊಸಕತೆ!

 

ಚೈತನ್ಯ ಹೆಗಡೆ

ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಗಣಿಗಳೂ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಭೂಮಿಯನ್ನು ಬಗೆದು ವಜ್ರ ತೆಗೆಯಲಾಗುತ್ತದೆ. ಹೀಗೆ ತೆಗೆಯುವ ವಜ್ರಗಳ ಶೇ. 90ರಷ್ಟನ್ನು ಕೆತ್ತುವ ಇಲ್ಲವೇ ಪಾಲಿಶ್ ಮಾಡುವ ಕೆಲಸ ಭಾರತದ್ದು. ಗುಜರಾತಿನ ಸೂರತ್ ನಗರ ಹೆಸರಾಗಿರುವುದೇ ವಜ್ರಗಳ ಪಾಲಿಶ್ ಮತ್ತು ಇನ್ನಿತರ ಆಭರಣ ಕಲ್ಲುಗಳ ವಿನ್ಯಾಸಕ್ಕೆ.

ಇದು ಹಳೆ ಕತೆ.

ವಜ್ರಗಳ ವಿಷಯದಲ್ಲಿ ಭಾರತ, ನಿರ್ದಿಷ್ಟವಾಗಿ ಗುಜರಾತ್, ಬರೆಯುತ್ತಿರುವ ಹೊಸಕತೆ ಏನು ಗೊತ್ತಾ? ಗಣಿಗಾರಿಕೆ ಮಾಡದೇ ಪ್ರಯೋಗಾಲಯದಲ್ಲೇ ಉತ್ಪಾದನೆ ಮಾಡುತ್ತಿರುವ ವಜ್ರದ ಹರಳುಗಳು! ಹೀಗೊಂದು ಹೊಸಕತೆಯನ್ನು ಭಾರತದ ವಜ್ರ ಕೆತ್ತುವ ಉದ್ಯಮವು ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ ಶುರು ಮಾಡಿತಾದರೂ ಜಾಗತಿಕ ಮಾರುಕಟ್ಟೆ ಅದನ್ನು ವ್ಯಾಪಕವಾಗಿ ಅಪ್ಪಿಕೊಳ್ಳುತ್ತಿರುವ ವಿದ್ಯಮಾನ ಇತ್ತೀಚಿನ ವರ್ಷಗಳದ್ದು. ಹಾಗೆಯೇ ಪ್ರಯೋಗಾಲಯ ನಿರ್ಮಿತ ವಜ್ರಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಉದ್ಯಮಗಳು ಹೆಚ್ಚಾಗಿರುವ ವಿದ್ಯಮಾನವೂ ಈಗ ಗಣನೆಗೆ ಸಿಗುತ್ತಿದೆ.

ಕಳೆದ ವಿತ್ತೀಯ ವರ್ಷದಲ್ಲಿ ಭಾರತದಿಂದ ರಫ್ತಾದ ಪ್ರಯೋಗಾಲಯ ನಿರ್ಮಿತ ವಜ್ರಗಳ ಮೌಲ್ಯ 1.3 ಬಿಲಿಯನ್ ಡಾಲರುಗಳಾಗಿದ್ದರೆ, ಈ ಬಾರಿಯ ವಿತ್ತೀಯ ವರ್ಷದಲ್ಲಿ ಇದರ ದುಪ್ಪಟ್ಟು ಮೌಲ್ಯ ರಫ್ತಾಗುವ ಅಂದಾಜಿದೆ. ಇನ್ನು ಕೆಲವೇ ವರ್ಷಗಳಲ್ಲಿ ಇದರ ವಹಿವಾಟು 7ರಿಂದ 8 ಬಿಲಿಯನ್ ಡಾಲರುಗಳಷ್ಟಿರುತ್ತವೆ ಅಂತ ಉದ್ಯಮದಲ್ಲಿ ತೊಡಗಿಸಿಕೊಂಡವರ ಅಂದಾಜು. ಅಮೆರಿಕದಿಂದ ಬರುತ್ತಿರುವ ಭಾರಿ ಬೇಡಿಕೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಮಾರುಕಟ್ಟೆಗಳಿಂದ ಸಿಗುತ್ತಿರುವ ಪ್ರೋತ್ಸಾಹ ಈ ಅಂದಾಜಿಗೆ ಕಾರಣ.

ನೈಸರ್ಗಿಕ ವಜ್ರ ಮತ್ತು ಪ್ರಯೋಗಾಲಯ ನಿರ್ಮಿತ ವಜ್ರಗಳಲ್ಲಿರುವ ವ್ಯತ್ಯಾಸವಾದರೂ ಏನು?

ನೈಸರ್ಗಿಕ ವಜ್ರ ಅಂತಂದ್ರೆ ಏನು ಅನ್ನೋದು ಮೊದಲು ಹಾಕಿಕೊಳ್ಳಬೇಕಾದ ಪ್ರಶ್ನೆ. ಸರಳವಾಗಿ ಹೇಳುವುದಾದರೆ ಅದು ಇಂಗಾಲ ಹರಳುಗಟ್ಟಿರುವ ಸ್ಥಿತಿ ಅಷ್ಟೆ. ಭೂಮಿಯ ಅಂತರಾಳದಲ್ಲಿ ಅಂದರೆ ಸುಮಾರು 200 ಕಿ.ಮೀ ಒಳಗೆ ಅಲ್ಲಿ ಶೇಖರಣೆಯಾದ ಇಂಗಾಲವು ಅತಿ ಶಾಖ ಮತ್ತು ಒತ್ತಡಗಳಿಗೆ ಸಿಲುಕಿ ಕಲ್ಲಾಗಿ ಪರಿವರ್ತನೆಯಾಗುವ ಹಂತದಲ್ಲಿ ವಜ್ರವಾಗಿದೆ.

ಈಗ ಭಾರತದ ವಜ್ರ ಉದ್ದಿಮೆಗಳು ಮಾಡುತ್ತಿರುವುದೇನು? ಮತ್ತೇನಿಲ್ಲ. ಇಂಗಾಲವನ್ನು ಹೀಗೆ ನಿರ್ದಿಷ್ಟ ಶಾಖ ಮತ್ತು ಒತ್ತಡಕ್ಕೆ ಸಿಲುಕಿಸಿ ವಜ್ರವಾಗಿಸುವ ಪ್ರಕ್ರಿಯೆಯನ್ನು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಮಾಡಿ ಯಶಸ್ವಿಯಾಗಿವೆ. ಸುಮಾರು 25 ಕಂಪನಿಗಳು ಹೀಗೆ ಭಾರತದಲ್ಲಿ ಪ್ರಯೋಗಾಲಯನಿರ್ಮಿತ ವಜ್ರವನ್ನು ತಯಾರಿಸುತ್ತಿವೆ.

ಎಷ್ಟೆಂದರೂ ನೈಸರ್ಗಿಕ ವಜ್ರವೇ ಬೇರೆ, ಇದೇ ಬೇರೆ ಅಂತ ವಾದಿಸುವುದಕ್ಕೂ ಅವಕಾಶವಿಲ್ಲ. ತಾಯಿಯ ಗರ್ಭದಿಂದ ಬಂದ ಶಿಶು ಹಾಗೂ ಪ್ರನಾಳ ಶಿಶುಗಳಲ್ಲಿ ಪ್ರಕ್ರಿಯೆಯ ವ್ಯತ್ಯಾಸಗಳಿದ್ದಿರಬಹುದು. ಆದರೆ ಭೂಮಿಗೆ ಬಂದ ನಂತರ ಇಬ್ಬರೂ ಮಾನವರೇ. ಅದರಲ್ಲೇನೂ ವ್ಯತ್ಯಾಸವಿಲ್ಲ ತಾನೇ? ಪ್ರಯೋಗಾಲಯ ನಿರ್ಮಿತ ವಜ್ರವೂ ಹಾಗೆಯೇ. ನೈಸರ್ಗಿಕ ವಜ್ರವನ್ನು ರೂಪಿಸಿರುವಂಥ ಮೂಲಧಾತುವೇ ಇದನ್ನೂ ನಿರ್ಮಿಸಿದೆ. ವಜ್ರವನ್ನು ಪ್ರಮಾಣೀಕರಿಸುವ ಯಾವ ಸಂಸ್ಥೆಯೂ ಇವುಗಳ ನಡುವೆ ವ್ಯತ್ಯಾಸ ಪತ್ತೆ ಹಚ್ಚಲಾರದು.

ಪರಿಸರಕ್ಕೆ ಅತಿದೊಡ್ಡ ಕೊಡುಗೆ

ಎಲ್ಲರೂ ಸಂಪತ್ತಿನಂತೆ ನೋಡುವ ವಜ್ರಗಳ ಗಣಿಗಾರಿಕೆ ಹಿಂದೆ ಪ್ರಕೃತಿ ಮತ್ತು ಮಾನವನ ಶೋಷಣೆಯೂ ಅದೆಷ್ಟು ಆಳವಾಗಿದೆ ಎಂಬುದು ಗೊತ್ತಿರದ ಸಂಗತಿ ಏನಲ್ಲ. ಬ್ಲಡ್ ಡೈಮಂಡ್ ಥರದ ಚಲನಚಿತ್ರಗಳು ಈ ಸಂಗತಿಯನ್ನು ಜನಪ್ರಿಯ ಮಾಧ್ಯಮದಲ್ಲಿ ಚೆನ್ನಾಗಿಯೇ ತೆಗೆದಿರಿಸಿವೆ. ಭೂಮಿಯ ಒಡಲು ಬಗೆಯುವ ಬೃಹತ್ ಗಣಿಗಾರಿಕೆ, ಅದರಿಂದಾಗುವ ಮಾಲಿನ್ಯ, ಈ ಪ್ರಕ್ರಿಯೆಯಲ್ಲಿ ಕಾರ್ಮಿಕರನ್ನು ಪ್ರಾಣಿಗಳಂತೆ ದುಡಿಸಿಕೊಳ್ಳುವುದು ಇವೆಲ್ಲ ಅನಿಷ್ಟಗಳನ್ನೂ ಇಲ್ಲವಾಗಿಸುವ ಮಾರ್ಗ ಪ್ರಯೋಗಾಲಯ ನಿರ್ಮಿತ ವಜ್ರ.

ಹಾಗೆಂದೇ ಪ್ರಯೋಗಾಲಯ ನಿರ್ಮಿತ ವಜ್ರದ ಬೆಲೆ ಸಹ ನೈಸರ್ಗಿಕ ವಜ್ರಕ್ಕಿಂತ ಶೇ.50ರಷ್ಟು ಕಡಿಮೆ. ಹೆಚ್ಚು ಬೆಲೆ ಇರುವುದನ್ನೇ ಕೊಂಡುಕೊಳ್ಳುವುದನ್ನು ಜಗತ್ತು ಪ್ರತಿಷ್ಟೆಯನ್ನಾಗಿ ನೋಡುತ್ತದೆ ಎಂಬುದು ನಿಜವೇ ಆದರೂ ಈಗ ವಿಶ್ವದಾದ್ಯಂತ ಪರಿಸರ ಸಂವೇದನೆಯ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಜಾಗೃತಿ ಮೂಡುತ್ತಿದೆ. ಈಗಿನ ಪೀಳಿಗೆಗೆ ಇದು ‘ಕೂಲ್’ ಸಂಗತಿ ಸಹ ಹೌದು. ಅಲ್ಲದೇ, ನೈಸರ್ಗಿಕ ವಜ್ರವನ್ನು ರೂಪಿಸುವ ಮೂಲಪದಾರ್ಥವೇ ಪ್ರಯೋಗಾಲಯ ಆಧರಿತ ವಜ್ರದಲ್ಲೂ ಇರುವುದರಿಂದ ಸದ್ಯಕ್ಕಂತೂ ಇದರ ವಹಿವಾಟು ಏರುಗತಿಯನ್ನು ಕಾಣುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!