ಉಗ್ರವಾದದ ಬಗ್ಗೆ ನಿಲುವು ತಾಳಲಾಗದ ವಿಶ್ವಸಂಸ್ಥೆ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ- ಭಾರತದ ಖಡಕ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್

ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಸಮಗ್ರ ನಿಲುವಳಿಯೊಂದನ್ನು ರೂಪಿಸುವುದನ್ನು ಮುಂದೂಡುತ್ತಲೇ ಬಂದು ಆ ವಿಷಯದಲ್ಲಿ ವೈಫಲ್ಯ ಪ್ರದರ್ಶಿಸಿವೆ- ಹೀಗಂತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೇ ಖಡಾಖಡಿಯಾಗಿ ಮಾತನಾಡಿದೆ ಭಾರತ.

ಉಗ್ರವಾದ ಎಂದರೇನು ಎಂಬ ಸಾಮಾನ್ಯ ವ್ಯಾಖ್ಯಾನ ರೂಪಿಸುವುದಕ್ಕೇ ವಿಶ್ವಸಂಸ್ಥೆಗಿನ್ನೂ ಸಾಧ್ಯವಾಗಿಲ್ಲ ಎಂದು ಟೀಕಿಸಿರುವ ಭಾರತ, ಜಾಗತಿಕ ಭಯೋತ್ಪಾದನೆಯ ಜಾಲವನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಸಮನ್ವಯದ ನೀತಿಯೊಂದನ್ನು ರಚಿಸುವುದರಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ ಎಂದು ನೇರವಾಗಿಯೇ ಹೇಳಿದೆ.

ವಿಶ್ವಸಂಸ್ಥೆಯ ಕಾರ್ಯಾವಳಿಗಳ ಮಹಾಲೇಖಪಾಲರ ವರದಿ ಮೇಲಿನ ಚರ್ಚೆ ಇದಾಗಿತ್ತು. ವಿಶ್ವಸಂಸ್ಥೆಗೆ ಭಾರತದ ಖಾಯಂ ಮಿಷನ್‌ನ ಎರಡನೇ ಕಾರ್ಯದರ್ಶಿ ದಿನೇಶ್ ಸೆಟಿಯಾ ಈ ಬಗ್ಗೆ ಮಾತನಾಡುತ್ತ, ಪ್ರಾರಂಭದಲ್ಲಿ ಭಾರತದ ಲಸಿಕೆ ವಿಕ್ರಮವನ್ನೂ ಹಾಗೂ ಅದು ಜಗತ್ತಿಗೆ ಸಹಾಯ ಮಾಡಿದ ರೀತಿಯನ್ನೂ ಬಣ್ಣಿಸಿದರು. ನಂತರ ಅವರು ವಿಮರ್ಶೆಗಿಳಿದಿದ್ದು ಉಗ್ರವಾದದ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಲಾಗದ ವಿಶ್ವಸಂಸ್ಥೆಯ ಬಗ್ಗೆ.

ಅವರು ಹೇಳಿದ್ದು-

ಎರಡನೇ ವಿಶ್ವಯುದ್ಧದ ನಂತರ ಜಗತ್ತನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗು ಉಗ್ರವಾದ. ಇದನ್ನು ಪರಿಹರಿಸುವುದರಲ್ಲಿರುವ ಅಸಾಮರ್ಥ್ಯ ವಿಶ್ವಸಂಸ್ಥೆಯ ಪ್ರಸ್ತುತತೆಯನ್ನೇ ಪ್ರಶ್ನೆ ಮಾಡುವಂತಿದೆ. ಏಕೆಂದರೆ ವಿಶ್ವಸಂಸ್ಥೆ ರಚನೆಯಾಗಿದ್ದೇ ಅಂಥ ಪಿಡುಗುಗಳಿಂದ ಜನರನ್ನು ರಕ್ಷಿಸುವುದಕ್ಕೆ.

ಅಂತಾರಾಷ್ಟ್ರೀಯ ಉಗ್ರವಾದದ ವಿರುದ್ಧ ಸಮಗ್ರ ನಿಲುವಳಿಯ ಕರಡೊಂದನ್ನು ಭಾರತ 1986ರಲ್ಲೇ ವಿಶ್ವಸಂಸ್ಥೆಗೆ ಸಲ್ಲಿಸಿತ್ತು. ಆದರೆ ಸದಸ್ಯ ರಾಷ್ಟ್ರಗಳ ನಡುವೆ ಸಮ್ಮತಿ ಮೂಡದೇ ಅದನ್ನು ಇದುವರೆಗೂ ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯವಾಗಿಲ್ಲ.

ಯಾವುದೇ ಸಂಸ್ಥೆಯ ಪ್ರಸ್ತುತತೆ ಮತ್ತು ದೀರ್ಘಾಯಸ್ಸು ನಿರ್ಧಾರವಾಗುವುದು ಅದು ಬದಲಾಗುತ್ತಿರುವ ಕಾಲಕ್ಕೆ ತನ್ನನ್ನು ತಾನು ಹೇಗೆ ಹೊಂದಿಸಿಕೊಳ್ಳುತ್ತಿದೆ ಎಂಬುದರ ಆಧಾರದಲ್ಲಿ. ಈ ಸಂಸ್ಥೆಯ ದೊಡ್ಡ ಅಂಗಗಳು ಇನ್ನೂ ಗತಕಾಲದಲ್ಲಿ ಹಿಮಗಟ್ಟಿ ನಿಂತಂತೆ ಇವೆ. ಇದರಿಂದ ಸಂಸ್ಥೆಯ ಕಾನೂನುಬದ್ಧತೆ ಮತ್ತು ಕಾರ್ಯಕ್ಷಮತೆಯಲ್ಲಿ ಬಿಕ್ಕಟ್ಟು ತಲೆದೋರುತ್ತದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸುಧಾರಣೆಗಳಾಗಬೇಕು ಎಂಬ ಕಾರ್ಯಸೂಚಿ ದಶಕಗಳಿಂದ ನೆನೆಗುದಿಗೆ ಬಿದ್ದುಕೊಂಡಿದೆ. ಕೊನೆಪಕ್ಷ ಈ ವರ್ಷವಾದರೂ ಈ ನಿಟ್ಟಿನಲ್ಲಿ ಗಟ್ಟಿಯಾದ ಪ್ರಗತಿಯಾಗಿ ಭದ್ರತಾ ಸಮಿತಿ ಮತ್ತು ವಿಶ್ವಸಂಸ್ಥೆ ಸಮಕಾಲೀನ ಜಗತ್ತಿನ ವಾಸ್ತವಗಳಿಗೆ ಹತ್ತಿರವಾಗಿವೆ ಎಂಬುದನ್ನು ನಿರೂಪಿಸಲಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!