ಹೈದ್ರಾಬಾದ್‌ ನಿಜಾಮನ ಕಾಲದ ನಾಪತ್ತೆಯಾದ ʼಜಗತ್ತಿನ ಅತಿದೊಡ್ಡ ಚಿನ್ನದ ನಾಣ್ಯಕ್ಕೆʼ ಮತ್ತೆ ಹುಡುಕಾಟ ಶುರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ನಾಲ್ಕು ದಶಕಗಳ ಹಿಂದೆ ನಾಪತ್ತೆಯಾದ ವಿಶ್ವದ ಅತಿದೊಡ್ಡ ನಾಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 12 ಕೆಜಿ ತೂಗುವ ಚಿನ್ನದ ನಾಣ್ಯಕ್ಕಾಗಿ  ಕೇಂದ್ರ ಸರ್ಕಾರವು ಮತ್ತೊಮ್ಮೆ ಶೋಧಕಾರ್ಯ ಆರಂಭಿಸಿದೆ.
ಹೈದರಾಬಾದ್‌ನ 8ನೇ ನಿಜಾಮ ಮುಕರಮ್ ಜಾಹ ಈ ನಾಣ್ಯವನ್ನು 1987ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಹರಾಜು ಮಾಡಲು ಉದ್ದೇಶಿಸಿದ್ದ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಸುಳಿವು ಸಿಕ್ಕಿ ಸಿಬಿಐ‌ ಸಂಸ್ಥೆಯ ಮೂಲಕ ಯೂರೋಪಿಯನ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಆತನ ಪ್ರಯತ್ನವನ್ನು ವಿಫಲಗೊಳಿಸಲಾಗಿತ್ತು. ಆದರೆ ಆ ಬಳಿಕ ನಾಣ್ಯ ನಿಗೂಢವಾಗಿ ನಾಪತ್ತೆಯಾಗಿತ್ತು. ಬರೋಬ್ಬರಿ 35 ವರ್ಷಗಳ ಬಳಿಕ ಈ ನಾಣ್ಯಕ್ಕೆ ಮತ್ತೊಮ್ಮೆ ಹುಡುಕಾಟ ಆರಂಭಿಸಲಾಗಿದೆ.
ಮೊಘಲ್ ಚಕ್ರವರ್ತಿ ಜಹಾಂಗೀರ್ ಕಾಲದಲ್ಲಿ ಮುದ್ರಿಸಲಾಗಿದ್ದ ಈ ನಾಣ್ಯವನ್ನು ತನ್ನ ಅಜ್ಜ ಹಾಗೂ ಹೈದರಾಬಾದ್‌ನ ಕೊನೆಯ ನಿಜಾಮನಾಗಿದ್ದ ಮೀರ್ ಒಸ್ಮಾನ್ ಅಲಿ ಖಾನ್ ರಿಂದ ಮುಕರಮ್ ಆನುವಂಶಿಕವಾಗಿ ಪಡೆದಿದ್ದ. ನಾಣ್ಯ ನಿಗೂಢವಾಗಿ ನಾಪತ್ತೆಯಾದ ಬಳಿಕ ಭಾರತದ ಅಗ್ರಮಾನ್ಯ ತನಿಖಾ ಸಂಸ್ಥೆಯಾದ ಸಿಬಿಐ ಸಹ ಅನೇಕಾ ವರ್ಷಗಳ ಕಾಲ ನಾಣ್ಯದ ಹಿಂದೆ ಬಿದ್ದಿತ್ತು. ಆದರೆ ನಾಣ್ಯದ ರಹಸ್ಯವನ್ನು ಬೇಧಿಸಲು ಸಿಬಿಐಗೆ ಸಾಧ್ಯವಾಗಲಿಲ್ಲ.
ವಿಶ್ವದ ಅತಿದೊಡ್ಡ ಚಿನ್ನದ ನಾಣ್ಯದ ಇತಿಹಾಸ ಮತ್ತು ಪರಂಪರೆಯ ಕುರಿತು ಸಂಶೋಧನೆ ನಡೆಸಿರುವ ಖ್ಯಾತ ಇತಿಹಾಸಗಾರ್ತಿ ಪ್ರೊ. ಸಲ್ಮಾ ಅಹಮದ್ ಫಾರೂಕಿ, ಇದು ಬೆಲೆಕಟ್ಟಲಾಗದ ಅಮೂಲ್ಯ ನಾಣ್ಯ ಮತ್ತು ಹೈದರಾಬಾದ್‌ನ ಹೆಮ್ಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ, ನಾಣ್ಯ ನಾಪತ್ತೆಯಾದ 35 ವರ್ಷಗಳ ನಂತರ ನಾಣ್ಯವನ್ನು ಪತ್ತೆಹಚ್ಚಲು ಹೊಸ ಪ್ರಯತ್ನಗಳು ಪ್ರಾರಂಭವಾಗಿವೆ. ಈ ಹಿಂದೆ ನಾಣ್ಯದ ತನಿಖೆಯ ಭಾಗವಾಗಿದ್ದ ಅನೇಕ ಸಿಬಿಐ ಅಧಿಕಾರಿಗಳು ಈಗ ಕಚೇರಿಯಲ್ಲಿಲ್ಲ, ಆದ್ದರಿಂದ ಹುಡುಕಾಟವು ಮತ್ತಷ್ಟು ಕ್ಲಿಷ್ಟಕರವಾಗಿ ಪರಿಣಮಿಸಿದೆ.
ಸಿಬಿಐನ ಮಾಜಿ ಜಂಟಿ ನಿರ್ದೇಶಕ ಶಾಂತೋನು ಸೇನ್ ಅವರು ತಮ್ಮ ಪುಸ್ತಕದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದು, ಜಹಾಂಗೀರ್ ಅಂತಹ ಎರಡು ದೊಡ್ಡ ನಾಣ್ಯಗಳನ್ನು ಮುದ್ರಿಸಿರುವುದು ಸಿಬಿಐ ಅಧಿಕಾರಿಗಳಿಗೆ ತಿಳಿದುಬಂದಿತ್ತು ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಒಂದು ನಾಣ್ಯವನ್ನು ಇರಾನ್‌ನ ಆಡಳಿತಗಾರ ಯಾದಗರ್ ಅಲಿಗೆ ನೀಡಲಾಗಿತ್ತು. ಇನ್ನೊಂದು ಹೈದರಾಬಾದ್‌ನ ನಿಜಾಮರ ಆಸ್ತಿಯಾಗಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಮುಕರಮ್ ಜಾಹ್ 1987 ರಲ್ಲಿ ಸ್ವಿಸ್ ಹರಾಜಿನಲ್ಲಿ ಎರಡು ಚಿನ್ನದ ಮೊಹರ್‌ಗಳನ್ನು ಹರಾಜು ಮಾಡಲು ಪ್ರಯತ್ನಿಸುತ್ತಿದ್ದ. ಅದರಲ್ಲಿ ಒಂದು ನಾಣ್ಯ 1,000 ತೊಲಾ ಇತ್ತು. ಇದರ ಮೌಲ್ಯ ಅಂದಿನ ಕಾಲಕ್ಕೆ 16 ಮಿಲಿಯನ್ ಗಳಷ್ಟಾಗಿತ್ತು. ಅದನ್ನು ಹರಾಜು ಹಾಕುವ ಮೂಲಕ ಮುಕರಮ್ ಜಾಹ್ 9 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳ ಸಾಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಎಂಬ ಮಾಹಿತಿಗಳು ಲಭ್ಯವಾಗಿದ್ದವು.
ಇದಾಗಿ ಹಲವು ವರ್ಷಗಳು ಕಳೆದಿವೆ ಮತ್ತು ಸ್ವಿಸ್ ಹರಾಜು ಮನೆಯಲ್ಲಿ ಜಹಾಂಗೀರ್ ಕಾಲದ ದೊಡ್ಡ ಚಿನ್ನದ ನಾಣ್ಯದ ಕಥೆ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ ಅವರು, ಕೇಂದ್ರದ ಹೊಸ ಪ್ರಯತ್ನಗಳು ಈ ಬಾರಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು ಎಂದು ಆಶಿಸುತ್ತೇವೆ ಎಂದು ಪ್ರೊ. ಸಲ್ಮಾ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!