ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದಕ್ಕೆ ಭಾರತ ಕಟುವಾಗಿ ತಿರುಗೇಟು ನೀಡಿದೆ.
ಕಾಶ್ಮೀರ ಭಾರತದ ಅವಿಭಾಜ್ಯ. ಈ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಅಡ್ಡಿಪಡಿಸಲು ಪಾಕಿಸ್ತಾನ ಭಯೋತ್ಪಾದನೆಯನ್ನು ಬಳಸಿಕೊಂಡಿದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ..
ಭಾರತದ ಪರವಾಗಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಭಾವಿಕಾ ಮಂಗಳಾನಂದನ್, ಜಗತ್ತಿಗೆ ತಿಳಿದಿರುವಂತೆ ಪಾಕಿಸ್ತಾನವು ತನ್ನ ನೆರೆಹೊರೆಯವರ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ. ನಮ್ಮ ಸಂಸತ್ತು, ನಮ್ಮ ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆ ಸ್ಥಳಗಳು ಮತ್ತು ತೀರ್ಥಯಾತ್ರೆಯ ಮಾರ್ಗಗಳ ಮೇಲೆ ದಾಳಿ ಮಾಡಿದೆ. ಇಂತಹ ದೇಶವು ಹಿಂಸೆಯ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆ ಎಂದು ಹೇಳಿದರು.
ಮಿಲಿಟರಿಯಿಂದಲೇ ನಡೆಯುವ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹೆಸರುವಾಸಿಯಾಗಿರುವ, ಡ್ರಗ್ಸ್ ಮಾರಾಟ ಮತ್ತು ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದಿರುವ ದೇಶವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಮೇಲೆ ಆರೋಪ ಹೊರಿಸಲು ಧೈರ್ಯ ಮಾಡಿರುವುದು ವಿಷಾದನೀಯ ಎಂದು ಹೇಳಿದರು.
ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆಯೊಂದಿಗೆ ಯಾವುದೇ ಒಪ್ಪಂದ ಸಾಧ್ಯವಿಲ್ಲ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯು ಅನಿವಾರ್ಯವಾಗಿ ಪರಿಣಾಮಗಳನ್ನು ಆಹ್ವಾನಿಸುತ್ತದೆ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೊತೆಗಿನ ಪಾಕಿಸ್ತಾನದ ಹಿಂದಿನ ಒಡನಾಟ ಮತ್ತು ಪ್ರಪಂಚದಾದ್ಯಂತದ ಭಯೋತ್ಪಾದಕ ಘಟನೆಗಳಲ್ಲಿ ಪಾಕಿಸ್ತಾನ ನಿಜವಾಗಿಯೂ ಏನೆಂದು ಜಗತ್ತು ಸ್ವತಃ ನೋಡುತ್ತಿದೆ ಎಂದು ಭಾರತ ಖಡಕ್ ಆಗಿ ಹೇಳಿದೆ.
ಈ ಪವಿತ್ರ ಸಭಾಂಗಣದಲ್ಲಿ ಪಾಕ್ ಪ್ರಧಾನ ಮಂತ್ರಿ ಹೀಗೆ ಮಾತನಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಅವರ ಮಾತುಗಳು ನಮಗೆಲ್ಲರಿಗೂ ಸ್ವೀಕಾರಾರ್ಹವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಬೇಕು. ಪಾಕಿಸ್ತಾನವು ಸತ್ಯವನ್ನು ಇನ್ನಷ್ಟು ಸುಳ್ಳಿನ ಮೂಲಕ ಎದುರಿಸಲು ಪ್ರಯತ್ನಿಸುತ್ತದೆ ಎಂದು ನಮಗೆ ತಿಳಿದಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ ಮತ್ತು ಅದನ್ನು ಪುನರಾವರ್ತನೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆಯ ಮೇಲೆ ಪಾಕಿಸ್ತಾನವು ನಿರಂತರವಾಗಿ ಗಡಿಯಾಚೆಗಿನ ಭಯೋತ್ಪಾದನೆ ಮೂಲಕ ತೊಂದರೆ ಕೊಟ್ಟಿದೆ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದಕ್ಕೆ ಸೂಕ್ತ ತಿರುಗೇಟು ಎದುರಿಸಬೇಕಾಗಲಿದೆ ಎಂಬುದನ್ನು ಪಾಕಿಸ್ತಾನ ಅರಿತಿರಲಿ ಎಂದೂ ಎಚ್ಚರಿಕೆ ನೀಡಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹಲವಾರು ನಿರ್ಣಯಗಳ ಮೂಲಕ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಸ್ವ-ನಿರ್ಣಯದ ಹಕ್ಕನ್ನು ಚಲಾಯಿಸಲು ಮುಕ್ತ, ನಿಷ್ಪಕ್ಷಪಾತ ಜನಾಭಿಪ್ರಾಯ ಸಂಗ್ರಹಣೆಗೆ ಕರೆ ನೀಡಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು.
ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತ ಸರ್ಕಾರ ಆಜಾದ್ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಆಕ್ರಮಣದ ವಿರುದ್ಧ ಪಾಕಿಸ್ತಾನವು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದೆ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಕಾಶ್ಮೀರದಲ್ಲಿ ಭಾರತವು 2019ರ ಆಗಸ್ಟ್ 5ರಲ್ಲಿ ತೆಗೆದುಕೊಂಡ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.