ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡುವೆ. ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ದಾಮೋಹ್ ನಗರದಲ್ಲಿ ಬುಧವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ದೇಶವನ್ನು ವಿಶ್ವದ ಅಗ್ರ ಮೂರು ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಮಾಡುವೆ. 2014 ರಲ್ಲಿ ಬಿಜೆಪಿ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬಂದಾಗ, ದೇಶದ ಆರ್ಥಿಕತೆಯು 10 ನೇ ಸ್ಥಾನದಲ್ಲಿತ್ತು. ಈಗ 5 ನೇ ಸ್ಥಾನಕ್ಕೆ ತರಲಾಗಿದೆ. 2 ಶತಮಾನಗಳ ಕಾಲ ನಮ್ಮನ್ನಾಳಿದ ಇಂಗ್ಲೆಂಡ್ ಅನ್ನೇ ಹಿಂದಿಕ್ಕಿ ಈ ಸಾಧನೆ ಮಾಡಿದ್ದೇವೆ. ಇದು ವಿಶ್ವಕ್ಕೇ ಅಚ್ಚರಿಯ ಸಂಗತಿಯಾಗಿದೆ. ಇದಾದ ಮೇಲೆ ಭಾರತದತ್ತ ವಿಶ್ವವೇ ನೋಟ ಬೀರಿದೆ ಎಂದು ಅವರು ಹೇಳಿದರು.
ನಮ್ಮ ಸರ್ಕಾರ ಇಷ್ಟೆಲ್ಲ ಸಾಧನೆ ಮಾಡಿದರೂ, ವಿಪಕ್ಷಗಳು ಯಾವತ್ತೂ ಒಂದೊಳ್ಳೆ ಮಾತನಾಡಲಿಲ್ಲ. ಸದಾ ಒಂದಲ್ಲ ಒಂದು ಚಕಾರ ಎತ್ತುತ್ತಲೇ ಇದ್ದಾರೆ. ಅವರಿಗೆ ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮತ್ತೆ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ, ನನ್ನ ಮೂರನೇ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರ ಮೂರರಲ್ಲಿ ನಿಲ್ಲಿಸುವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆ ಪಕ್ಷದ ಮಾಜಿ ಪ್ರಧಾನಿಯೊಬ್ಬರು ಈ ಹಿಂದೆ ಹೇಳಿದಂತೆ ‘ಶೇ.85 ರಷ್ಟು ಕಮಿಷನ್ ವ್ಯವಸ್ಥೆ’ ದೇಶದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೇಂದ್ರದಿಂದ ಬಿಡುಗಡೆಯಾದ ಪ್ರತಿ 1 ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಉದ್ದೇಶಿತ ಫಲಾನುಭವಿಗೆ ತಲುಪುತ್ತದೆ. ಉಳಿದ 85 ರಷ್ಟು ಪೋಲಾಗುತ್ತಿದೆ ಎಂದು ಹೇಳಿದ್ದರು. ಇದನ್ನೇ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಉಚಿತ ಅಕ್ಕಿ ಘೋಷಣೆ ವಿರುದ್ಧ ದೂರು
ಕೇಂದ್ರ ಸರ್ಕಾರ ಬಡ ಜನರಿಗಾಗಿ ಮುಂದಿನ ಐದು ವರ್ಷಗಳವರೆಗೆ ಉಚಿತ ಪಡಿತರವನ್ನು ಘೋಷಿಸಿದೆ. ಆದರೆ, ವಿಪಕ್ಷಗಳು ಚುನಾವಣಾ ವಿಷಯವನ್ನಾಗಿಸಿ ದೂರು ಸಲ್ಲಿಸುವುದಾಗಿ ಹೇಳುತ್ತಿವೆ. ಚುನಾವಣಾ ಆಯೋಗಕ್ಕೆ ಉಚಿತ ಅಕ್ಕಿ ಘೋಷಣೆಯನ್ನು ನಿಲ್ಲಿಸಲು ಕೋರಲು ಮುಂದಾಗಿವೆ. ಅವರು (ವಿಪಕ್ಷಗಳು) ಇಂತಹ ಮಹಾಪಾಪವನ್ನು ಮುಂದುವರಿಸಲಿ. ನಾವು ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡುವುದನ್ನು ಮುಂದುವರಿಸುತ್ತೇವೆ ಎಂದರು.