ಏಷ್ಯಾಕಪ್‌ ನಲ್ಲಿ ಮತ್ತೊಂದು ಭರ್ಜರಿ ಜಯ: ಮಲೇಷ್ಯಾ ವಿರುದ್ಧ ಗೆದ್ದುಬೀಗಿದ ಹರ್ಮನ್‌ ಪ್ರೀತ್‌ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದ ಸಿಲ್ಹೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್‌ ಗುಂಪುಹಂತದ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಮಲೇಷ್ಯಾ ವನಿತೆಯರ ವಿರುದ್ಧ ಡಿಆರ್‌ ಎಸ್‌ ವಿಧಾನದ ಅನ್ವಯ 30 ರನ್‌ಗಳ ವಿಜಯ ಸಾಧಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಭಾರತದ ಪರ ಓಪನರ್‌ ಗಳು ಭರ್ಜರಿ ಪ್ರದರ್ಶನ ನೀಡಿದರು. ಖಾಯಂ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾಗೆ ವಿಶ್ರಾಂತಿ ನೀಡಿದ್ದರಿಂದ ಆ ಸ್ಥಾನದಲ್ಲಿ ಕಣಕ್ಕಿಳಿದ ಸುಬ್ಬಿನೇನಿ ಮೇಘನಾ ಕೇವಲ 53 ಎಸೆತಗಳಲ್ಲಿ 69 ರನ್ ಸಿಡಿಸಿದರು. ಆಕೆಯ ಅದ್ಭುತ ಇನ್ನಿಂಗ್ಸ್ ನಲ್ಲಿ ಒಂದು ಸಿಕ್ಸರ್ ಮತ್ತು 11 ಬೌಂಡರಿಗಳಿದ್ದವು.
ಮತ್ತೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 39 ಎಸೆತಗಳಲ್ಲಿ 46 ರನ್ ಗಳಿಸಿ ಆಫರ್ಮ್‌ ಗೆ ಮರಳಿದರು. ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೇವಲ 19 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳ ಸಹಾಯದಿಂದ ಅಜೇಯ 33 ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 181 ರನ್‌ ಗಳ ಬೃಹತ್‌ ಮೊತ್ತ ದಾಖಲಿಸಿತು.
ಮಲೇಷ್ಯಾ ಪರ 17 ವರ್ಷದ ಬೌಲರ್ ನೂರ್ ದಾನಿಯಾ ಸ್ಯುಹದಾ 9 ರನ್‌ ಗೆ 2 ವಿಕೆಟ್‌ ಕಬಳಿಸಿ ಯಶಸ್ವಿ ಬೌಲರ್‌ ಎನಿಸಿಕೊಂಡರು. ಗುರಿ ಬೆನ್ನತ್ತಿದ ವಿನಿಫ್ರೆಡ್ ದುರೈಸಿಂಗಂ ನೇತೃತ್ವದ ಮಲೆಷ್ಯಾ ತಂಡವು ನೀರಸ ಪ್ರದರ್ಶನ ತೋರಿತು. ಮಳೆ ಬರುವ ಮುನ್ನ ತಂಡವು 5.2 ಓವರ್‌ ಗಳಲ್ಲಿ 16 ರನ್‌ ಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಬಳಿಕ ಮಳೆ ಪಂದ್ಯಕ್ಕೆ ಸಂಪೂರ್ಣ ಅಡ್ಡಿಪಡಿಸಿದ್ದರಿಂದ ಡಿಆರ್‌ ಎಸ್‌ ವಿಧಾನದ ಅನ್ವಯ ಭಾರತ 30 ರನ್‌ ಗಳಿಂದ ವಿಜಯಿ ಎಂದು ಘೋಷಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!