ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಲೆನ್ ಫಿಲಿಪ್ಸ್ ಅವರ ಸ್ಫೋಟಕ ಶತಕ ಮತ್ತು ಜಾಕಬ್ ಡಫಿ ಅವರ ಮಾರಕ ಬೌಲಿಂಗ್ ದಾಳಿಗೆ ಭಾರತ ತಂಡ ತತ್ತರಿಸಿದೆ. ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 87 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 7 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿ ತನ್ನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನ ಗರಿಷ್ಠ ಮೊತ್ತವನ್ನು ದಾಖಲಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ 9 ವಿಕೆಟ್ ಕಳೆದುಕೊಂಡು 172 ರನ್ಗಳಿಗೆ ಸೀಮಿತವಾಯಿತು.
49 ಎಸೆತಗಳಲ್ಲಿ ಫಿಲಿಪ್ಸ್ ಶತಕದ ಅಬ್ಬರ
ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ ಕೇವಲ 49 ಎಸೆತಗಳಲ್ಲಿ 107 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣರಾದರು. ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ಗಳು ಸೇರಿದ್ದವು. ಆರಂಭದಲ್ಲಿ ಭಾರತೀಯ ಬೌಲರ್ಗಳು 109 ರನ್ಗಳಿಗೆ ನಾಲ್ಕು ವಿಕೆಟ್ ಕಬಳಿಸಿ ಆತಿಥೇಯರನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ಫಿಲಿಪ್ಸ್ ಮತ್ತು ಮೈಕೆಲ್ ಬ್ರೇಸ್ವೆಲ್ ಜೋಡಿ ಪಂದ್ಯದ ಚಿತ್ರಣವನ್ನೇ ಬದಲಿಸಿತು.
40 ಎಸೆತಗಳಲ್ಲಿ 115 ರನ್ಗಳ ಜೊತೆಯಾಟ
ಫಿಲಿಪ್ಸ್ ಹಾಗೂ ಬ್ರೇಸ್ವೆಲ್ ಕೇವಲ 40 ಎಸೆತಗಳಲ್ಲಿ 115 ರನ್ಗಳ ಜೊತೆಯಾಟವಾಡಿದರು. ಈಡನ್ ಪಾರ್ಕ್ನ ಮೈದಾನದ ಸಣ್ಣ ಬೌಂಡರಿಗಳ ಲಾಭ ಪಡೆದ ಬ್ಯಾಟರ್ಗಳು ಭಾರತೀಯ ಬೌಲರ್ಗಳ ಮೇಲೆ ನಿರಂತರ ದಾಳಿ ನಡೆಸಿದರು. ನಿತೀಶ್ ರೆಡ್ಡಿ ನಾಲ್ಕು ಓವರ್ಗಳಲ್ಲಿ 64 ರನ್ ಬಿಟ್ಟುಕೊಟ್ಟರು.
ಇದನ್ನೂ ಓದಿ:
ಪವರ್ಪ್ಲೇನಲ್ಲೇ ಕುಸಿದ ಭಾರತದ ಬ್ಯಾಟಿಂಗ್
260 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಯಿತು. ಜಾಕಬ್ ಡಫಿ ಮೊದಲ ಓವರ್ನಲ್ಲೇ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರನ್ನು ಔಟ್ ಮಾಡಿದರು. ಬಳಿಕ ಅಭಿಷೇಕ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಇದರಿಂದ ಭಾರತದ ಗೆಲುವಿನ ಆಸೆಗೆ ಆರಂಭದಲ್ಲೇ ಹಿನ್ನಡೆಯಾಯಿತು.
ಕೆಳಕ್ರಮಾಂಕದ ಆಟಗಾರರು ಪ್ರತಿರೋಧ ತೋರಿದರೂ ಭಾರತಕ್ಕೆ ಗುರಿ ತಲುಪಲು ಸಾಧ್ಯವಾಗಲಿಲ್ಲ. ಡಫಿ 29 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿ ಪಂದ್ಯದ ಪ್ರಮುಖ ಬೌಲರ್ ಎನಿಸಿದರು.



