ಕೊನೆಯ ಓವರ್‌ ನಲ್ಲಿ ರೋಚಕ ಜಯ ತಂದುಕೊಟ್ಟ ಅಕ್ಷರ್‌: ಭಾರತಕ್ಕೆ ವಿಶ್ವದಾಖಲೆಯ ಸರಣಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅಕ್ಷರ್ ಪಟೇಲ್ (35 ಎಸೆತಗಳಲ್ಲಿ ಅಜೇಯ 64 ರನ್) ಸ್ಫೋಟಕ ಆಟದ ಬಲದಿಂದ ವೆಸ್ಟ್ ಇಂಡೀಸ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿದ ಭಾರತ  2-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ.
ಗೆಲ್ಲಲು 312 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಕೊನೆಯ ಓವರ್‌ ನಲ್ಲಿ 8 ರನ್ ಅಗತ್ಯವಿತ್ತು. ತಂಡ ಅದಾಗಲೇ 8 ವಿಕೆಟ್‌ ಗಳನ್ನು ಕಳೆದುಕೊಂಡಿತ್ತು.  ಸಿರಾಜ್ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ ನಲ್ಲಿದ್ದರು. ಮೊದಲ ಮೂರು ಎಸೆತಗಳಲ್ಲಿ 0,1,1 ರನ್ನುಗಳಷ್ಟೇ ಹರಿದುಬಂದವು. ಕೊನೆಯ 3 ಎಸೆತಗಳಲ್ಲಿ ಭಾರತದ ಗೆಲುವಿಗೆ 6 ರನ್ ಬೇಕಾಗಿತ್ತು. ಆದರೆ 4 ಎಸೆತವನ್ನು ಭರ್ಜರಿ ಸಿಕ್ಸರ್ ಗಟ್ಟಿದ ಅಕ್ಷರ್ ಪಟೇಲ್ ಇನ್ನೂ 2 ಎಸೆತ ಬಾಕಿ ಇರುವಂತೆ ಭಾರತಕ್ಕೆ 2 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಶುಭಮನ್ ಗಿಲ್ 43 ರನ್ ಆಟದ ಬಲದಿಂದ ಉತ್ತಮ ಮೊತ್ತದತ್ತ ಸಾಗುತ್ತಿದ್ದ ಭಾರತ ಹಟಾತ್‌ ಕುಸಿತಕ್ಕೆ ಒಳಗಾಯ್ತು. ತಂಡ 79 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಶ್ರೇಯಸ್ ಅಯ್ಯರ್ 63 ರನ್ (71 ಎಸೆತ, 4 ಬೌಂಡರಿ, 1 ಸಿಕ್ಸ್) ಸಂಜು ಸ್ಯಾಮ್ಸನ್ 54 ರನ್ (51 ಎಸೆತ, 3 ಬೌಂಡರಿ, 3 ಸಿಕ್ಸ್) ಅಮೋಘವಾಗಿ ಆಡಿದರು. ಇವರಿಬ್ಬರ ನಡುವೆ 4ನೇ ವಿಕೆಟ್‍ ಪಾಲುದಾರಿಕೆಯಲ್ಲಿ 99 ರನ್ ಹರಿದುಬಂದಿತು. ಈ ಇಬ್ಬರ ವಿಕೆಟ್‌ ಪತನದ ಬಳಿಕ ಭಾರತ ಮತ್ತೆ ಕುಸಿತದ ಹಾದಿಹಿಡಿಯಿತು. ಕೊನೆಯ ಹಂತದಲ್ಲಿ ಆರ್ಭಟಿಸಿದ ಅಕ್ಷರ್‌ ಪಟೇಲ್‌ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು. ಈ ಜಯದ ಮೂಲಕ ಭಾರತ ತಂಡವು ಒಂದೇ ಎದುರಾಳಿ ವಿರುದ್ಧ ಸತತ 12 ಸರಣಿಗಳನ್ನು ಗೆದ್ದ ವಿಶ್ವದ ಮೊದಲ ತಂಡವೆಂಬ ವಿಶ್ವದಾಖಲೆ ಬರೆದಿದೆ.

ಶಾಯ್‌ ಹೋಪ್‌ ಶತಕ ಸಾಧನೆ:
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ತಂಡಕ್ಕೆ ಶಾಯ್ ಹೋಪ್ ಭರ್ಜರಿ ಶತಕ 115 ರನ್ (135 ಎಸೆತ, 8 ಬೌಂಡರಿ, 3 ಸಿಕ್ಸ್) ಸಿಡಿಸಿ ಆಸರೆಯಾದರು. ಕೈಲ್ ಮೇಯರ್ಸ್ 65 ರನ್, ನಾಯಕ ನಿಕೊಲಸ್ ಪೂರನ್ 74 ರನ್ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ವಿಂಡೀಸ್‌ 50 ಓವರ್‌ ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 311ರನ್‌ ಗಳ ಬೃಹತ್‌ ಮೊತ್ತ ಕಲೆಹಾಕಿತು.ಭಾರತದ ಪರ ಸ್ಪಿನ್ ಜೋಡಿಯಾದ ಅಕ್ಸರ್ (1/40) ಮತ್ತು ಹೂಡಾ (1/42) ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಆದರೆ ಯುಜ್ವೇಂದ್ರ ಚಾಹಲ್ (1/69) ಕೊಂಚ ದುಬಾರಿಯಾದರು. ವೇಗಿ ಶಾರ್ದೂಲ್ ಠಾಕೂರ್ (3/54) ಗಮನಾರ್ಹ ಪ್ರದರ್ಶ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!