Wednesday, June 7, 2023

Latest Posts

ಭಾರತ ಪಾಕ್ ಜೊತೆಗಿನ ಸಂಬಂಧವನ್ನು ಬಯಸುತ್ತದೆ ಆದರೆ…: ಜಪಾನ್‌ನಲ್ಲಿ ಪ್ರಧಾನಿ ಮೋದಿ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನ ಹಿರೋಶಿಮಾಗೆ (PM Modi Japan Visit) ತೆರಳಿರುವ ನರೇಂದ್ರ ಮೋದಿ ಅವರಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಇದೇ ವೇಳೆ ಮೋದಿ ಅವರು ಅನಿವಾಸಿ ಭಾರತೀಯರ ಜತೆ ಮಾತುಕತೆ ನಡೆಸಿದ್ದಾರೆ. ಇನ್ನು, ಜಿ-7 ಶೃಂಗಸಭೆಯ ಮಧ್ಯೆಯೇ ನಿಕ್ಕೇಯಿ ಏಷ್ಯಾ (Nikkei Asia) ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಭಾರತ-ಪಾಕಿಸ್ತಾನ ಸಂಬಂಧದ ಕುರಿತು ಪ್ರಸ್ತಾಪಿಸಿದ್ದಾರೆ.

ಭಾರತವು ಪಾಕಿಸ್ತಾನದೊಂದಿಗೆ (Pakistan) ನೆರೆಹೊರೆಯ ಸಂಬಂಧವನ್ನು ಬಯಸುತ್ತದೆ ಆದರೆ ಭಯೋತ್ಪಾದನೆಯಿಂದ ಮುಕ್ತವಾದ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಇಸ್ಲಾಮಾಬಾದ್‌ನ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಭಾರತವು ಪಾಕಿಸ್ತಾನದೊಂದಿಗೆ ಸಾಮಾನ್ಯ ದ್ವಿಪಕ್ಷೀಯ ಬಾಂಧವ್ಯವನ್ನು ಬಯಸುತ್ತದೆ . ಆದ್ರೆ ಭಯೋತ್ಪಾದನೆ ಮತ್ತು ಹಗೆತನದಿಂದ ಮುಕ್ತವಾದ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಅವರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದಿದ್ದಾರೆ.

ಪಾಕಿಸ್ತಾನವು ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮುಂದಾಗುವುದಿಲ್ಲ. ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಿಸಲು ಪಾಕಿಸ್ತಾನವು ಕನಿಷ್ಠ ಪ್ರಯತ್ನವನ್ನೂ ಮಾಡುವುದಿಲ್ಲ. ಇದರಿಂದಾಗಿ ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿಲ್ಲ ಎಂದು ಹೇಳಿದರು.

ಭಾರತವುಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲದ ಬಗ್ಗೆ ತನ್ನ ಕಳವಳವನ್ನು ಪದೇ ಪದೇ ವ್ಯಕ್ತಪಡಿಸುತ್ತಿದೆ . ಅದೇ ವೇಳೆ ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ. ನೆರೆಯ ರಾಷ್ಟ್ರದ ಜತೆ ಉತ್ತಮ ಸಂಬಂದ ಹೊಂದಬೇಕು, ದ್ವಿಪಕ್ಷೀಯ ವ್ಯಾಪಾರಗಳಿಗೆ ಆದ್ಯತೆ ನೀಡಬೇಕು ಎಂಬುದು ಭಾರತದ ಉದ್ದೇಶವಾಗಿದೆ ಎಂದು ತಿಳಿಸಿದರು.

ಚೀನಾ ಬಿಕ್ಕಟ್ಟಿನ ಕುರಿತು ಹೇಳಿದ್ದೇನು?

ಚೀನಾ ಜತೆ ಉಂಟಾಗಿರುವ ಸಂಘರ್ಷದ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋದಿ, ನಮ್ಮ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ನಾವು ಸಕಲ ರೀತಿಯಲ್ಲಿ ಬದ್ಧರಾಗಿದ್ದೇವೆ ಎಂದು ಹೇಳಿದರು.

ಗಡಿಯಲ್ಲಿ ಶಾಂತಿ ಸ್ಥಾಪನೆ ಹಾಗೂ ಯಥಾಸ್ಥಿತಿ ಕಾಪಾಡುವುದರಿಂದ ಭಾರತ ಹಾಗೂ ಚೀನಾದ ದ್ವಿಪಕ್ಷೀಯ ಸಂಬಂಧ ಸರಿಯಾಗಿರುತ್ತದೆ. ಪರಸ್ಪರ ಸಹಕಾರ, ಸಮ್ಮತಿ, ಶಾಂತಿ ಸ್ಥಾಪನೆಯಿಂದ ಮಾತ್ರ ಸಂಬಂಧ ವೃದ್ಧಿಯಾಗಲು ಸಾಧ್ಯ. ಇದರಿಂದ ಎರಡೂ ದೇಶಗಳಿಗೆ ಅನುಕೂಲವಾಗುವ ಜತೆಗೆ, ಜಗತ್ತಿಗೂ ನೆರವಾಗಲಿದೆ ಎಂದರು.

ಉಕ್ರೇನ್ ಸಂಘರ್ಷ ಕುರಿತು ಹೇಳಿದ್ದೇನು?
ಉಕ್ರೇನ್ ಸಂಘರ್ಷದಲ್ಲಿ ಭಾರತವು ಮಧ್ಯವರ್ತಿ ಪಾತ್ರವನ್ನು ವಹಿಸಬಹುದೇ ಎಂಬ ಪ್ರಶ್ನೆಗೆ, ಉಕ್ರೇನ್ ಸಂಘರ್ಷದ ಬಗ್ಗೆ ತಮ್ಮ ದೇಶದ ನಿಲುವು ಸ್ಪಷ್ಟ ಮತ್ತು ಅಚಲವಾಗಿದೆ ಎಂದು ಮೋದಿ ಹೇಳಿದ್ದಾರೆ.

ಭಾರತವು ಶಾಂತಿಯನ್ನೇ ಬಯಸುತ್ತದೆ ಮತ್ತು ಇದೇ ನಿಲುವು ಮುಂದುವರಿಸುತ್ತದೆ. ವಿಶೇಷವಾಗಿ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯ ಸಂದರ್ಭದಲ್ಲಿ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಸವಾಲುಗಳನ್ನು ಎದುರಿಸುವವರಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ನಾವು ರಷ್ಯಾ ಮತ್ತು ಉಕ್ರೇನ್ ಎರಡರೊಂದಿಗೂ ಸಂವಹನವನ್ನು ನಿರ್ವಹಿಸುತ್ತೇವೆ. ಸಹಕಾರ ಮತ್ತು ಸಹಯೋಗವು ನಮ್ಮ ಕಾಲವನ್ನು ವ್ಯಾಖ್ಯಾನಿಸಬೇಕು, ಸಂಘರ್ಷವಲ್ಲ ಎಂದಿದ್ದಾರೆ ಮೋದಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!