Thursday, December 1, 2022

Latest Posts

ಇಂದು ಮಹಿಳಾ ಏಷ್ಯಾಕಪ್ ಫೈನಲ್: ಏಳನೇ ಬಾರಿ ಕಪ್‌ ಗೆಲುವಿನತ್ತ ಟೀಂ ಇಂಡಿಯಾ ಕಣ್ಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಮಹಿಳಾ ಏಷ್ಯಾ ಕಪ್ -2022 ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತದ ವನಿತೆಯರು ಶ್ರೀಲಂಕಾ ವನಿತೆಯರಿಗೆ ಮುಖಾಮುಖಿಯಾಗಲಿದ್ದಾರೆ. 2004 ರಲ್ಲಿ ಪ್ರಾರಂಭಗೊಂಡ ಮಹಿಳಾ ಏಷ್ಯಾಕಪ್​ನಲ್ಲಿ ಈ ವರೆಗೆ ನಡೆದ ಏಳು ಆವೃತ್ತಿಗಳಲ್ಲಿ ಆರು ಸೀಸನ್ ಗಳಲ್ಲಿ ಚಾಂಪಿಯನ್‌ ಆಗುವ ಮೂಲಕ ಭಾರತ ಪ್ರಾಬಲ್ಯ ಮೆರೆದಿದೆ. ಕಳೆದ ಸೀಸನ್‌ ನ ಫೈನಲ್‌ ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಸೋಲಿನ ಕಹಿ ಅನುಭವಿಸಿತ್ತು. ಇಂದಿನ ಫೈನಲ್‌ ನಲ್ಲಿ ಭಾರತ ಗೆದ್ದರೆ ಏಳನೇ ಬಾರಿ ಕಪ್ ಗೆದ್ದ ದಾಖಲೆ ಬರೆಯಲಿದೆ.
ಟೂರ್ನಿಯಲ್ಲಿ ಆರು ಪಂದ್ಯಗಳಿಂದ 10 ಪಾಯಿಂಟ್‌ಗಳೊಂದಿಗೆ ಗುಂಪು ಹಂತದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮುಂದಿನ ಹಂತಕ್ಕೆ ದಾಪುಗಾಲಿಟ್ಟಿದ್ದ ಟೀಂ ಇಂಡಿಯಾ, ಸೆಮಿಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್ ಮಹಿಳೆಯರನ್ನು ಸೋಲಿಸಿ  ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮೀಸ್‌ ನಲ್ಲಿ ಶಫಾಲಿ ವರ್ಮಾ 28 ಎಸೆತಗಳಲ್ಲಿ 42 ರನ್ ಮತ್ತು ಹರ್ಮನ್‌ಪ್ರೀತ್ 30 ಎಸೆತಗಳಲ್ಲಿ 36 ರನ್ ಗಳಿಸುವುದರೊಂದಿಗೆ ಮೊದಲು ಬ್ಯಾಟಿಂಗ್ ಮಾಡುವಾಗ ಭಾರತ 148/6 ಸ್ಕೋರ್ ಮಾಡಿತು. ನಂತರ ಸ್ಪಿನ್ ಆಲ್ ರೌಂಡರ್ ದೀಪ್ತಿ ಶರ್ಮಾ ಕೇವಲ ಏಳು ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಕಬಳಿಸುವ ಮೂಲಕ ಥಾಯ್ಲೆಂಡ್ ತಂಡವನ್ನು 20 ಓವರ್ ಗಳಲ್ಲಿ ಕೇವಲ 74/9 ಕ್ಕೆ ನಿರ್ಬಂಧಿಸಿದರು.

14 ವರ್ಷದ ಬಳಿಕ ಫೈನಲ್‌ ಗೆ ಲಗ್ಗೆ ಇಟ್ಟ ಶ್ರೀಲಂಕಾ
ಎರಡನೇ ಸೆಮಿಫೈನಲ್ ಹಣಾಹಣಿಯಲ್ಲಿ ಕೊನೆಯ ಎಸೆತದಲ್ಲಿ ರೋಚಕವಾಗಿ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ಮಹಿಳೆಯರು ಐದನೇ ಬಾರಿಗೆ ಪಂದ್ಯಾವಳಿಯ ಫೈನಲ್ ತಲುಪಿದ್ದಾರೆ. ಮೊದಲು ಬ್ಯಾಟ್‌ ಮಾಡಿದ್ದ ಶ್ರೀಲಂಕಾ ಕೇವಲ 122/6 ಗೆ ಸೀಮಿತವಾಯಿತು. ಗುರಿ ಬೆನ್ನತ್ತಿದ್ದ ಪಾಕಿಸ್ತಾನ 20 ಓವರ್‌ ಗಳಲ್ಲಿ 6 ವಿಕೆಟ್‌ ಗೆ 121 ರನ್‌ ಗಳಿಸಲಷ್ಟೇ ಶಕ್ತವಾದ ಪಾಕ್‌ 1 ರನ್‌ ಗಳಿಂದ ಏಷ್ಯಾಕಪ್‌ ಫೈನಲ್‌ ಮಿಸ್‌ ಮಾಡಿಕೊಂಡಿತು. ಗ್ರೂಪ್ ಹಂತದಲ್ಲಿ ಶ್ರೀಲಂಕಾವನ್ನು 41 ರನ್‌ಗಳಿಂದ ಬಗ್ಗುಬಡಿದಿದ್ದ ಭಾರತ ಶನಿವಾರ ಟ್ರೋಫಿ ಎತ್ತುವ ನೆಚ್ಚಿನ ತಂಡವಾಗಿದೆ.
ಉಭಯ ತಂಡಗಳು ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ತಂಡ ಭರ್ಜರಿ ಮೇಲುಗೈ ಹೊಂದಿದೆ. ಶ್ರೀಲಂಕಾ ವಿರುದ್ಧ ಭಾರತ 17 ಬಾರಿ ಗೆಲುವು ಸಾಧಿಸಿದ್ದರೆ, ಶ್ರೀಲಂಕಾ ಕೇವಲ 4 ಬಾರಿ ಗೆದ್ದಿದೆ, ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್‌ 11:
ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ ಪ್ರೀತ್ ಕೌರ್(ನಾಯಕಿ), ದೀಪ್ತಿ ಶರ್ಮಾ, ಸ್ನೇಹ ರಾಣಾ, ಡಿ. ಹೇಮಲತಾ, ರಿಚಾ ಘೋಷ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್‌ 11:
ಎಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಮಲ್ಶಾ ಶೆಹಾನಿ, ರಶ್ಮಿ ಸಿಲ್ವಾ, ಓಶದಿ ರಣಸಿಂಗ್, ಇನೋಕಾ ರಣವೀರ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!