ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಒಟ್ಟಾರೆ ಆಂತರಿಕ ಉತ್ಪನ್ನ(ಜಿಡಿಪಿ)ಇದೇ ಪ್ರಥಮ ಬಾರಿಗೆ 4 ಟ್ರಿಲ್ಲಿಟನ್ ಡಾಲರ್ ಮಾರ್ಕ್ ದಾಟಿ ಹೊಸ ಇತಿಹಾಸ ಬರೆದಿದೆ ಎಂಬುದಾಗಿ ಅನೇಕ ಮಾಧ್ಯಮ ವರದಿಗಳು ಘೋಷಿಸಿವೆ. ನ.18ರಂದು ಪ್ರಕಟವಾದ ಜಾಗತಿಕ ದೇಶಗಳ ಜಿಡಿಪಿಯ ಲೈವ್ ಪಟ್ಟಿಯಲ್ಲಿ ಈ ಅಂಕಿ-ಅಂಶಗಳು ಕಂಡುಬಂದಿವೆ ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಕೇಂದ್ರ ಹಣಕಾಸು ಇಲಾಖೆ ಅಥವಾ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ ಅಧಿಕೃತವಾಗಿ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವರದಿಗಳು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಸಾರವಾಗಿವೆ.ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಸಾಧನೆಗಾಗಿ ವಿವಿಧ ನಾಯಕರು, ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸಾಧನೆಯನ್ನು ಪ್ರಶಂಸಿದ್ದಾರೆ. 2027ರೊಳಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂಬುದಾಗಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಕೂಡ ಹೇಳಿದ್ದರೆ, ಭಾರತದ ಪ್ರಧಾನ ಆರ್ಥಿಕ ಸಲಹೆಗಾರರಾದ ಖ್ಯಾತ ಆರ್ಥಿಕ ತಜ್ಞ ಅನಂತ ನಾಗೇಶ್ವರ್ ಅವರು ಭಾರತ ಮುಂದಿನ ಏಳು ವರ್ಷಗಳಲ್ಲಿ 7ಟ್ರಿಲ್ಲಿಯನ್ ಡಾ.ಆರ್ಥಿಕತೆಯನ್ನು ತಲುಪುವ ಗುರಿ ಹೊಂದಿದೆ ಎಂದಿದ್ದಾರೆ.
ಜಿಡಿಪಿಯಲ್ಲಿ 4ಟ್ರಿಲ್ಲಿಯನ್ ಡಾ.ದಾಟುವ ಮೂಲಕ ಭಾರತ ಐತಿಹಾಸಿಕ ಮೈಲುಗಲ್ಲೊಂದನ್ನು ದಾಟಿದೆ.ಇದು ಜಾಗತಿಕ ಮಟ್ಟದಲ್ಲಿ ನಮ್ಮ ಮಹತ್ವದ ಸಾಧನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪರಿವರ್ತನಶೀಲ, ಡೈನಾಮಿಕ್ ಮತ್ತು ದೂರದೃಷ್ಟಿಯ ನಾಯಕತ್ವದ ಕಾರಣದಿಂದ ಈ ಅಭೂತಪೂರ್ವ ಎತ್ತರಕ್ಕೆ ಏರಲು ಸಾಧ್ಯವಾಗಿದೆ ಎಂಬುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಅವರು ಕೂಡ ದೇಶದ ಸಾಧನೆ ಅನನ್ಯ ಎಂದು ಬಣ್ಣಿಸಿ ಮೋದಿ ನಾಯಕತ್ವಕ್ಕೆ ನಮೋ ಎಂದಿದ್ದಾರೆ.
ರಾಷ್ಟ್ರವು 4ಟ್ರಿಲ್ಲಿಯನ್ ಡಾ.ಜಿಡಿಪಿ ಮೈಲುಗಲ್ಲನ್ನು ದಾಟಿದ್ದು, ಇದಕ್ಕಾಗಿ ನನ್ನ ಪ್ರೀತಿಯ ಭಾರತೀಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.ನಿಮಗೆ ಹೆಚ್ಚಿನ ಶಕ್ತಿ ಮತ್ತು ನಿಮಗೆ ಹೆಚ್ಚಿನ ಗೌರವ ಸಲ್ಲಿಸುವೆ ಎಂಬುದಾಗಿ ಫಡ್ನವೀಸ್ ಹೇಳಿದ್ದಾರೆ. “ನಾವೀಗ ಮೊದಲ ಬಾರಿಗೆ ೪ಟ್ರಿಲ್ಲಿಯನ್ ಡಾಲರ್‌ಗಳ ಆರ್ಥಿಕತೆಯನ್ನು ದಾಟಿ ನರೇಂದ್ರ ಮೋದಿಯವರು ನೀಡಿರುವ ೫ಟ್ರಿಲ್ಲಿಯನ್ ಡಾಲರ್ ಗ್ಯಾರಂಟಿ”ಯತ್ತ ಸಾಗುತ್ತಿದ್ದೇವೆ ಎಂಬುದಾಗಿ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿಜಿಯವರ ಒಂಬತ್ತೂವರೆ ವರ್ಷಗಳ ಆಡಳಿತದಲ್ಲಿ ಭಾರತದ ಈ ಮಹತ್ತರ ಸಾಧನೆಗೆ ಅಭಿನಂದನೆ ಎಂಬುದಾಗಿ ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷೆ ಪುರಂದರೇಶ್ವರಿ ಅವರು ಹೇಳಿದ್ದಾರೆ. ಭಾರತದ ಈ ಸಾಧನೆಯನ್ನು ಉದ್ಯಮಿ ಗೌತಮ್ ಆದಾನಿ ಕೂಡ ಶ್ಲಾಘಿಸಿದ್ದು, ಭಾರತದ ಸಾಧನೆ ನಮ್ಮ ಹೆಮ್ಮೆ . ಭಾರತವೀಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ (ಜಪಾನಿನ 4.4ಟ್ರಿಲ್ಲಿಯನ್ ಡಾ.ಮತ್ತು ಜರ್ಮನಿಯ 4.3ಟ್ರಿಲ್ಲಿಯನ್ ಡಾ.ಆರ್ಥಿಕತೆಯನ್ನು ಮೀರಿಸುವತ್ತ ಭಾರತ ಸಾಗುತ್ತಿದೆ)ಯಾಗಿ ಹೊರಹೊಮ್ಮುವತ್ತ ದಾಪುಗಾಲಿಡುತ್ತಿದೆ .2026-27ರಲ್ಲಿ ಭಾರತ ೫ಟ್ರಿಲ್ಲಿಯನ್ ಡಾ.ಗುರಿ ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.