ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಪೋಖರಾ ನಗರದಲ್ಲಿ ‘ಇಂಡಿಯನ್ ಎಕ್ಸ್-ಸರ್ವೀಸ್‌ಮೆನ್ ಗೂರ್ಖಾ ಬ್ರಿಗೇಡ್ ನೇಪಾಳ’ ಸಂಘಟನೆಯ ನೇತೃತ್ವದಲ್ಲಿ ಮಾಜಿ ಗೂರ್ಖಾ ಸೈನಿಕರು ಹಾಗೂ ಅವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಭಾರತೀಯ ಸೇನೆಯಲ್ಲಿ ನೇಪಾಳಿ ಯುವಕರ ನೇಮಕಾತಿಯನ್ನು ‘ಅಗ್ನಿಪಥ್’ ಯೋಜನೆಯಡಿಯಲ್ಲಿ ತಕ್ಷಣವೇ ಪುನರಾರಂಭಿಸಬೇಕು ಎಂಬುದು ಇವರ ಪ್ರಮುಖ ಆಗ್ರಹವಾಗಿದೆ. ಭಾರತೀಯ ಸೇನಾ ಮುಖ್ಯಸ್ಥರ ನೇಪಾಳ ಪ್ರವಾಸದ ಮುನ್ನಾದಿನಗಳಲ್ಲೇ ಈ ಹಕ್ಕೊತ್ತಾಯ ನಡೆದಿರುವುದು ಗಮನಾರ್ಹವಾಗಿದೆ.

ನೇಪಾಳಿ ಯುವಕರಿಗೆ ಸುವರ್ಣ ಅವಕಾಶ ಹಾಗೂ ಆರ್ಥಿಕ ಭದ್ರತೆ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬ್ರಿಗೇಡ್ ಅಧ್ಯಕ್ಷ ಕರ್ನಲ್ ಕೃಷ್ಣ ಬಹದ್ದೂರ್ ಖತ್ರಿ ಅವರು, 1816ರ ಸುಗೌಲಿ ಒಪ್ಪಂದದ ನಂತರ ಕಳೆದ 207 ವರ್ಷಗಳಿಂದ ಉಭಯ ದೇಶಗಳ ನಡುವೆ ಸೇನಾ ನೇಮಕಾತಿ ನಿರಂತರವಾಗಿ ನಡೆದುಬಂದಿದೆ ಎಂದು ಸ್ಮರಿಸಿದ್ದಾರೆ.
ಅಗ್ನಿಪಥ್ ಯೋಜನೆಯಡಿ ಸೇರುವ ಯುವಕರು 4 ವರ್ಷಗಳ ಸೇವಾವಧಿಯಲ್ಲಿ ಗೌರವಾನ್ವಿತ ಮಿಲಿಟರಿ ತರಬೇತಿಯ ಜೊತೆಗೆ ಸುಮಾರು 45 ರಿಂದ 50 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಗಳಿಕೆ ಮಾಡಲು ಅವಕಾಶವಿದೆ. 50 ಡಿಗ್ರಿ ಸೆಲ್ಸಿಯಸ್ ಸುಡುವ ಬಿಸಿಲಿನಲ್ಲಿ ಗಲ್ಫ್ ದೇಶಗಳಿಗೆ ತೆರಳಿ ಅಲ್ಪ ವೇತನಕ್ಕೆ ದುಡಿಯುವುದಕ್ಕಿಂತ, ಭಾರತೀಯ ಸೇನೆಗೆ ಸೇರುವುದು ಯುವಕರ ಭವಿಷ್ಯ ಹಾಗೂ ಗೌರವಕ್ಕೆ ನೂರಾರು ಪಟ್ಟು ಉತ್ತಮವಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ಗಮನ ಸೆಳೆದಿದ್ದಾರೆ.

ಭಾರತ – ನೇಪಾಳ ಬಾಂಧವ್ಯಕ್ಕೆ ಸಕಾರಾತ್ಮಕ ಮುನ್ನೋಟ
2022ರಲ್ಲಿ ಭಾರತ ಸರ್ಕಾರ ಪರಿಚಯಿಸಿದ ಅಗ್ನಿಪಥ್ ಯೋಜನೆಯಡಿ, ಶೇಕಡಾ 25ರಷ್ಟು ಅಗ್ನಿವೀರರಿಗೆ ಕಾಯಂ ಸೇವಾ ಅವಕಾಶ ದೊರೆಯುತ್ತದೆ. ಕೋವಿಡ್-19 ಮತ್ತು ಯೋಜನೆಯ ವೈಶಿಷ್ಟ್ಯಗಳ ಕಾರಣದಿಂದ ನೇಮಕಾತಿ ಅಮಾನತಿನಲ್ಲಿತ್ತಾದರೂ, ಇದನ್ನು ಮರುಜಾರಿಗೊಳಿಸುವುದರಿಂದ ನೇಪಾಳದ ಯುವಜನತೆಗೆ ಸುಭದ್ರ ಉದ್ಯೋಗ ಮತ್ತು ಜಾಗತಿಕ ಮಟ್ಟದ ಶಿಸ್ತು ಲಭಿಸಲಿದೆ.
ಈ ಪ್ರಕ್ರಿಯೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಲ್ಲದೆ, ಭಾರತ ಹಾಗೂ ನೇಪಾಳ ನಡುವಿನ ಶತಮಾನಗಳ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸೈನಿಕ ನಂಟನ್ನು ಮತ್ತಷ್ಟು ಗಟ್ಟಿಗಳಿಸಲಿದೆ ಎಂಬ ಆಶಾವಾದ ವ್ಯಕ್ತವಾಗಿದೆ.



