ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪುರುಷರ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ.
ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಗೆ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗುವ ವಿಚಾರವಾಗಿ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಸ್ಪಷ್ಟನೆ ನೀಡಿದ್ದು, ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದೆ.
‘ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಕಳುಹಿಸಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಭದ್ರತಾ ಕಾಳಜಿಯ ದೃಷ್ಟಿಯಿಂದ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ನಾವು ಬಿಸಿಸಿಐಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡುವ ಬಗ್ಗೆ ಇದ್ದ ಅನುಮಾನಗಳಿಗೆ ತೆರೆಬಿದ್ದಿದೆ.
ಇನ್ನು ಭಾರತ ತಂಡದ ನಿರ್ಧಾರ ಹೊರ ಬೀಳುತ್ತಿದ್ದಂತೆಯೇ ಅತ್ತ ಐಸಿಸಿ ಕೂಡ ಟೂರ್ನಿ ಕುರಿತು ನಿರ್ಣಯ ಕೈಗೊಳ್ಳಲು ಮಹತ್ವದ ಸಭೆ ನಡೆಸಿದೆ. ಐಸಿಸಿ ಇಂದು ವರ್ಚುವಲ್ ಸಭೆ ನಡೆಸುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹಗ್ಗಜಗ್ಗಾಟಕ್ಕೆ ತೆರೆ ಎಳೆಯುವ ಸಲುವಾಗಿ ಐಸಿಸಿ ಈ ಸಭೆಯನ್ನು ಏರ್ಪಡಿಸಿದೆ ಎನ್ನಲಾಗಿದೆ.