ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್‌ಗೆ ಅನಿವಾರ್ಯ: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವರದಿ, ಚಿತ್ರದುರ್ಗ: 
ರಾಜ್ಯದ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ. ಈಗ ಇರುವುದು ಕಾಂಗ್ರೆಸ್ ಬುಡುಬುಡಿಕೆ ಸರ್ಕಾರ. ಇದು ಹಗರಣಗಳ ಸರ್ಕಾರ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಮಾಡುವುದು ಸೂರ್ಯ, ಚಂದ್ರ ಹುಟ್ಟಿದಷ್ಟೇ ಸತ್ಯ. ಪ್ರತಿ ನಿತ್ಯ ಒಂದೊಂದು ಹಗರಣಗಳು ನಡೆಯುತ್ತಿವೆ. ಹಗರಣಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರು ಮುಖ್ಯಮಂತ್ರಿ ಬದಲಾಯಿಸುವ ಅನಿವಾರ್ಯತೆ ಇದೆ ಎಂದರು.
ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿ ಈಗ ಬೇಲ್ ಮೇಲೆ ಹೊರಗೆ ಬಂದಿರುವ ನಾಗೇಂದ್ರ ಅವರಿಗೆ ಹೆದರಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣ ಲೋಕಸಭೆಯ ಚುನಾವಣೆಯಲ್ಲಿ ಬಳಕೆಯಾಗಿದೆ ಎಂದು ವರದಿಯಲ್ಲಿ ಬಂದಿದೆ. ಇದಕ್ಕೆ ಹೆದರಿ ಕಾಂಗ್ರೆಸ್ ನಾಯಕರು ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಅನಂತ್ ಕುಮಾರ್ ಹೆಗಡೆಯವರು ಒಂದು ಭಾಷಣದಲ್ಲಿ ಏನೋ ಮಾತನಾಡಿದ್ದರು. ಕಾಂಗ್ರೆಸ್‌ನವರು ಅದನ್ನೇ ಹಿಡಿದುಕೊಂಡು ದುರುಪಯೋಗ ಮಾಡಿಕೊಂಡರು. ದೇಶದ ತುಂಬಾ ಅಪಪ್ರಚಾರ ನಡೆಸಿದ್ದಾರೆ. ಸಂಘ ಪರಿವಾರದವರು, ಬಿಜೆಪಿಯವರು ಸಂವಿಧಾನ ಬದಲು ಮಾಡುತ್ತಾರೆ ಎಂದು ಗುಲ್ಲು ಎಬ್ಬಿಸಿ ಚುನಾವಣೆಯಲ್ಲಿ ಎಸ್.ಸಿ., ಎಸ್.ಟಿ., ಓಬಿಸಿ ಮತಗಳನ್ನು ಪಡೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸಂಘ ಪರಿವಾರ ಮತ್ತು ಬಿಜೆಪಿ ಅವರನ್ನು ಬದಲಾವಣೆ ಮಾಡಿದೆ ಎಂದರು.

ಯಡಿಯೂರಪ್ಪನವರ ೧೨ ಕೋಟಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಈಗಾಗಲೇ ತನಿಖೆಯಾಗಿರುವ ವಿಷಯವನ್ನು ಹಿಡಿದುಕೊಂಡು ಕಾಂಗ್ರೆಸ್ ಅದನ್ನು ಮತೆ ಕೆದಕುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಪ್ರಾಸಿಕ್ಯೋಷನ್‌ಗೆ ಕಳುಹಿಸಿದಾಗ ಹಿಂದಿನ ರಾಜ್ಯಪಾಲರು ಇದನ್ನು ತಿರಸ್ಕಾರ ಮಾಡಿದ್ದರು. ಇದನ್ನು ಮತ್ತೆ ಓಪನ್ ಮಾಡುವುದು ಎಂದರೆ ಇದು ದ್ವೇಷದ ರಾಜಕಾರಣ. ಕಾಂಗ್ರೆಸ್‌ನವರು ದ್ವೇಷ ಸಾಧಿಸುತ್ತಿದ್ದಾರೆ. ಕಾಂಗ್ರೆಸ್ ಹಲವಾರು ಹಗರಣದಲ್ಲಿ ಸಿಲುಕಿ ಈಗ ಬೇರೆಯವರ ಕಡೆಗೆ ಬೊಟ್ಟು ಮಾಡುತ್ತಿದೆ. ಇದು ದುರುದ್ದೇಶದಿಂದ ಮಾಡುವ ಆರೋಪ ಎಂದು ಕಿಡಿಕಾರಿದರು.

ಭದ್ರಾ ಮೇಲ್ದೆಂಡೆ ಯೋಜನೆಗೆ ೫೩೦೦ ಕೋಟಿ ರೂ. ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಪತ್ರ ಬರೆಯುವುದರಲ್ಲಿ ತಪ್ಪಿಲ್ಲ. ಆದರೆ ಕಾಮಗಾರಿ ಬಂದ್ ಮಾಡಿ ಹಣ ಕೇಳುವುದು ಸರಿಯಲ್ಲ. ೨೦೦೮-೦೯ನೇ ಸಾಲಿನಲ್ಲಿ ಯೋಜನೆ ಪ್ರಾರಂಭವಾಗಿದೆ. ಅಂದಿನಿಂದ ಇವತ್ತಿನವರೆಗೂ ಕಾಂಗ್ರೆಸ್ ಸರ್ಕಾರ ಇದ್ದಾಗ ಭದ್ರಾ ಮೇಲ್ದಂಡೆಗಾಗಲಿ, ಕೃಷ್ಣ ಯೋಜನೆಗಾಗಲಿ ಹಣ ನೀಡುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ಆದತ್ಯೆ ನೀಡಲಿಲ್ಲ. ನಮ್ಮ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದಾಗ ೫೭೦೦ ಕೋಟಿ ರೂ.ಗಳನ್ನು ನೀಡಿ,  ಕಾಮಗಾರಿ ವೇಗ ನೀಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷದಲ್ಲಿ ಗುತ್ತಿಗೆದಾರರ ಹಣ ಪಾವತಿ ಮಾಡಿಲ್ಲ. ಇದರಿಂದ ಗುತ್ತಿಗೆದಾರರು ಕೆಲಸ ಬಂದ್ ಮಾಡಿದ್ದಾರೆ ಎಂದರು.

ಬಿಜೆಪಿ ಆಂತರಿಕ ಬೇಗುದಿ ತಲೆನೋವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಬಿಜೆಪಿಯ ಸಮಸ್ಯೆಯ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ವರಿಷ್ಠರು ಗಮನ ಹರಿಸುತ್ತಿದ್ದಾರೆ. ಇದನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!