ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸೇನಾ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸುವುದಕ್ಕಿಂತ ಸೇನೆಯೊಳಗಿನ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಮಾಹಿತಿ ಕದಿಯಲು ವಿದೇಶಿ ಗುಪ್ತಚರ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ದೀಕ್ಷಿತ್ ಎಚ್ಚರಿಕೆ ನೀಡಿದ್ದಾರೆ.
ನೇರ ಸೈಬರ್ ದಾಳಿ ನಡೆಸುವುದು ಸುಲಭವಲ್ಲ
ಭಾರತೀಯ ಸೇನೆಯ ಪ್ರಮುಖ ಕಂಪ್ಯೂಟರ್ ಜಾಲಗಳು ಇಂಟರ್ನೆಟ್ನಿಂದ ಪ್ರತ್ಯೇಕವಾಗಿರುವುದರಿಂದ ನೇರ ಸೈಬರ್ ದಾಳಿ ನಡೆಸುವುದು ಸುಲಭವಲ್ಲ. ಆದರೆ, ಸೇನೆಯೊಳಗಿನ ವ್ಯಕ್ತಿಗಳನ್ನೇ ಬಳಸಿಕೊಂಡು ಸೂಕ್ಷ್ಮ ಮಾಹಿತಿಯನ್ನು ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಒಳಗಿನ ಅಪಾಯಗಳ ಬಗ್ಗೆ ವಾಯುಪಡೆಗೆ ಅರಿವಿದ್ದು, ತಾಂತ್ರಿಕ ಹಾಗೂ ಸಾಂಸ್ಥಿಕ ಮಟ್ಟದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ
ಖಾಸಗಿ ವಲಯದಲ್ಲಿಯೂ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಸುರಕ್ಷಿತ ಸಾಫ್ಟ್ವೇರ್ ಬಳಕೆ ಮತ್ತು ಕಂಪ್ಯೂಟರ್ ಜಾಲಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಿದರೆ ಬಹುತೇಕ ಅಪಾಯಗಳನ್ನು ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಲವು ಗೂಢಚರ್ಯೆ ಪ್ರಕರಣ ಪತ್ತೆ
ಇತ್ತೀಚಿನ ದಿನಗಳಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಗೂಢಚರ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಸಂಬಂಧಿಸಿದ ವ್ಯಕ್ತಿಗಳು ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ, ಹಣದ ಆಮಿಷವೊಡ್ಡಿ ಸೇನಾ ಸಿಬ್ಬಂದಿಯಿಂದ ಗೌಪ್ಯ ಮಾಹಿತಿಗಳನ್ನು ಪಡೆಯಲು ಯತ್ನಿಸಿರುವ ಆರೋಪಗಳಿವೆ.
ಇತ್ತೀಚೆಗೆ ದೆಹಲಿ ಪೊಲೀಸರು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರನ್ನು ಬಂಧಿಸಿದ್ದು, ಅವರು ಸೇನಾ ಕಾರ್ಯಾಚರಣೆಗಳ ನಿಯೋಜನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸಹೋದ್ಯೋಗಿಯ ಮೊಬೈಲ್ನಲ್ಲಿ ಮಾಹಿತಿ ಕದಿಯುವ ಮಾಲ್ವೇರ್ ಅಳವಡಿಸಲು ಯತ್ನಿಸಿದ ಆರೋಪವೂ ಇದೆ.
ಇನ್ನು ಅಕ್ಟೋಬರ್ನಲ್ಲಿ ಆಂಧ್ರಪ್ರದೇಶ ಪೊಲೀಸರು ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯ ನಾವಿಕ ಪ್ರದೀಪ್ ಮುಖರ್ಜಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದರು. ಪಾಕಿಸ್ತಾನದ ಮಹಿಳಾ ಏಜೆಂಟ್ ಎಂದು ಶಂಕಿಸಲಾದ ವ್ಯಕ್ತಿಯೊಂದಿಗೆ ಆನ್ಲೈನ್ ಸಂಪರ್ಕ ಹೊಂದಿದ್ದ ಆರೋಪ ಅವರ ಮೇಲಿದೆ.



