September 13, 2026
Sunday, September 13, 2026
spot_img

ಬಾಕ್ಸಿಂಗ್‌ನಲ್ಲಿ ಭಾರತದ ಡಬಲ್ ಗೋಲ್ಡ್: ಪ್ರೀತಿ ಪವಾರ್ ಜತೆ ಚಿನ್ನಕ್ಕೆ ಕೊರಳೊಡ್ಡಿದ ಜೈಸ್ಮಿನ್ ಲಂಬೋರಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತದ ಬಾಕ್ಸರ್ ಪ್ರೀತಿ ಪವಾರ್ ಮಹಿಳೆಯರ 54 ಕೆ.ಜಿ ವಿಭಾಗದಲ್ಲಿ ಕೆನಡಾದ ಸ್ಕಾರ್ಲೆಟ್ ಸಾವನ್ನಾ ಡೆಲ್ಗಾಡೊ ಅವರನ್ನು 5-0 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಆರಂಭದಲ್ಲಿ ಎದುರಾಳಿಯಿಂದ ಸವಾಲು ಎದುರಾದರೂ, ಬಳಿಕ ಆಕ್ರಮಣಕಾರಿ ಆಟ ಮತ್ತು ಅತ್ಯುತ್ತಮ ಫುಟ್‌ವರ್ಕ್‌ನಿಂದ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಭಾರತಕ್ಕೆ ಮೊದಲ ಬಾಕ್ಸಿಂಗ್ ಚಿನ್ನ ತಂದುಕೊಟ್ಟರು.

ಜೈಸ್ಮಿನ್ ಲಂಬೋರಿಯಾ ಕೂಡ ಗೋಲ್ಡ್ ವಿಜೇತೆ

ಪ್ರೀತಿ ಪವಾರ್ ಸಾಧನೆಯ ಕೆಲವೇ ಕ್ಷಣಗಳ ಬಳಿಕ ಮಹಿಳೆಯರ 57 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಜೈಸ್ಮಿನ್ ಲಂಬೋರಿಯಾ ಉತ್ತರ ಐರ್ಲೆಂಡ್‌ನ ಅನುಭವಿ ಬಾಕ್ಸರ್ ಮೈಕೇಲಾ ವಾಲ್ಶ್ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ನಾಲ್ಕು ಬಾರಿ ಕಾಮನ್‌ವೆಲ್ತ್ ಪದಕ ವಿಜೇತೆಯಾಗಿದ್ದ ವಾಲ್ಶ್ ವಿರುದ್ಧ ಜೈಸ್ಮಿನ್ ನೀಡಿದ ಪ್ರದರ್ಶನ ಗಮನ ಸೆಳೆಯಿತು.

ಜಡುಮಣಿ ಸಿಂಗ್‌ಗೆ ಬೆಳ್ಳಿ

ಪುರುಷರ 55 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಜಡುಮಣಿ ಸಿಂಗ್ ಆಸ್ಟ್ರೇಲಿಯಾದ ಜೈ ಡಿಕ್ಸನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲಂಬೋರಿಯಾ ಅವರ ಚಿನ್ನದ ಸಾಧನೆಯಿಂದ ಭಾರತದ ಬಾಕ್ಸಿಂಗ್ ತಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !