ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೊದಲ ಮಿಲಿಟರಿ ಸಾರಿಗೆ ವಿಮಾನ ಸಿ- ೨೯೫ ತನ್ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ.
ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತ ಮತ್ತೊಂದು ಬೃಹತ್ ಹೆಜ್ಜೆ ಮುಂದಕ್ಕಿಟ್ಟಿದ್ದು, ಮೇಕ್ ಇನ್ ಇಂಡಿಯಾ ಭಾಗವಾಗಿ ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಹಾಗೂ ಯುರೋಪಿನ ಏರೋಸ್ಪೇಸ್ ಸಂಸ್ಥೆಯಾದ ಏರ್‌ಬಸ್ ಡಿಫೆನ್ಸ್ ಸಹಯೋಗದಲ್ಲಿ ತಯಾರಾದ ಮೊದಲ ಸ್ವದೇಶಿ ನಿರ್ಮಿತ ವಿಮಾನ ಇದಾಗಿದೆ.
ಇದರ ವಿಶೇಷತೆ ಏನು?
ಈ ವಿಮಾನ ಬಹುಪಯೋಗಿ ಆಗಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯನಿರ್ವಹಣೆ ಸುಲಭವಾಗಿದೆ. ಸೈನಿಕ ಹಾಗೂ ನಾಗರಿಕ ಕಾರ್ಯಾಚರಣೆಯಲ್ಲಿಯೂ ಈ ವಿಮಾನವನ್ನು ಬಳಕೆ ಮಾಡಬಹುದಾಗಿದೆ. ಈ ವಿಮಾನದಿಂದಾಗಿ ಒಂದು ಬಾರಿಗೆ ೭೧ ಮಂದಿ ಸಶಸ್ತ್ರ ಸೈನಿಕರು ಅಥವಾ ೫೦ ಜನ ಪ್ಯಾರಾಟ್ರೂಪರ್‌ಗಳನ್ನು ಯುದ್ಧಭೂಮಿ ಕಡೆಗೆ ಸಾಗಿಸಬಹುದಾಗಿದೆ.
ಇನ್ನು ಮಿಲಿಟರಿ ಕಾರ್ಯಾಚರಣೆಗೆ ಬೇಕಾದ ಸಶಸ್ತ್ರಗಳು, ಮಿಲಿಟರಿ ವಾಹನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಈ ವಿಮಾನ ಲ್ಯಾಂಡ್ ಆಗೋದಕ್ಕೆ ದೊಡ್ಡ ಜಾಗ ಬೇಕೆಂದಿಲ್ಲ. ಮಾಮೂಲಿ ರನ್‌ವೇ ಅಥವಾ ಇನ್ನೂ ಕಿರಿದಾದ ರನ್‌ವೇಗಳ ಮೇಲೆ ಇದು ಸುಲಭವಾಗಿ ಇಳಿಯುತ್ತದೆ.
ನೈಸರ್ಗಿಕ ವಿಪತ್ತಿನ ಸಮಯದಲ್ಲಿಯೂ ಇದನ್ನು ಬಳಸಬಹುದಾಗಿದೆ. ಪ್ರವಾಹ, ಭೂಕಂಪ, ಸಮುದ್ರದಲ್ಲಿ ಸಿಲುಕಿದ ಜನರನ್ನು ಹುಡುಕುವುದು, ಅವರಿಗೆ ಅನ್ನ ನೀರು ಹಾಗೂ ಔಷಧವನ್ನು ಮೇಲಿನಿಂದಲೇ ತಲುಪಿಸಲು ಸಹಾಯ ಮಾಡುತ್ತದೆ. ಇನ್ನು ರೇಡಾರ್ ಹಾಗೂ ಸೆನ್ಸಾರ್‌ಗಳು ಕೂಡ ಈ ವಿಮಾನದಲ್ಲಿದೆ. ಕಳ್ಳಸಾಗಣೆ, ನುಸುಳುಕೋರರನ್ನು ಹುಡುಕಲು ಸಹಾಯವಾಗುತ್ತದೆ. ಒಮ್ಮೆ ಈ ವಿಮಾನ ಆಗಸಕ್ಕೆ ಹಾರಿದರೆ ಕನಿಷ್ಠ ೧೧-೧೩ ಗಂಟೆ ಕಾರ್ಯನಿರ್ವಹಿಸಲಿದೆ.



