June 25, 2026
Thursday, June 25, 2026
spot_img

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆರಂಭ: ಇನ್ಮುಂದೆ ಚಿನ್ನದ ಆಮದು ಕಮ್ಮಿಯಾಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ದೇಶದ ಮೊತ್ತಮೊದಲ ವಾಣಿಜ್ಯ ಮಟ್ಟದ ಖಾಸಗಿ ಚಿನ್ನದ ಗಣಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿ ಈ ಬಹುನಿರೀಕ್ಷಿತ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಯೋಜನೆಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಉದ್ಘಾಟಿಸಿದ್ದಾರೆ.

ಆಮದು ಹೊರೆ ತಗ್ಗಿಸುವ ನಿರೀಕ್ಷೆ

ಭಾರತವು ವಿದೇಶಗಳಿಂದ ಅತಿಹೆಚ್ಚು ಆಮದು ಮಾಡಿಕೊಳ್ಳುವ ವಸ್ತುಗಳಲ್ಲಿ ತೈಲದ ನಂತರ ಚಿನ್ನವೇ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಚಿನ್ನದ ಬಳಕೆ ಕಡಿಮೆ ಮಾಡಲು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಈ ಖಾಸಗಿ ಗಣಿ ಆರಂಭವಾಗಿದ್ದು, ದೇಶದ ಚಿನ್ನದ ಆಮದು ಪ್ರಮಾಣವನ್ನು ಇದು ಸ್ವಲ್ಪಮಟ್ಟಿಗೆ ತಗ್ಗಿಸುವ ನಿರೀಕ್ಷೆಯಿದೆ.

ಇತಿಹಾಸದಲ್ಲೇ ಮೊದಲು!

ಇದುವರೆಗೆ ದೇಶದಲ್ಲಿ ಕರ್ನಾಟಕದ ಕೋಲಾರ (KGF) ಮತ್ತು ರಾಯಚೂರಿನ ಹಟ್ಟಿ (HGML) ಚಿನ್ನದ ಗಣಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇವೆರಡೂ ಬ್ರಿಟಿಷರ ಕಾಲದ ಸರ್ಕಾರಿ ಸ್ವಾಮ್ಯದ ಗಣಿಗಳಾಗಿವೆ. ಸ್ವಾತಂತ್ರ್ಯದ ನಂತರ ಆರಂಭವಾಗಿರುವ ಮೊದಲ ವಾಣಿಜ್ಯ ಮಟ್ಟದ ಖಾಸಗಿ ಚಿನ್ನದ ಗಣಿ ಯೋಜನೆ ಎಂಬ ಹೆಗ್ಗಳಿಕೆ ಜೊನ್ನಗಿರಿಯದ್ದಾಗಿದೆ. ವಿಶೇಷವೆಂದರೆ, ಮೌರ್ಯ ಸಾಮ್ರಾಟ ಅಶೋಕನ ಕಾಲದಲ್ಲೂ (ಕ್ರಿ.ಪೂ. 3ನೇ ಶತಮಾನ) ಈ ಪ್ರದೇಶವು ಚಿನ್ನದ ಉತ್ಪಾದನಾ ಕೇಂದ್ರವಾಗಿತ್ತು.

‘ಜೊನ್ನಗಿರಿ’ ಇನ್ಮುಂದೆ ‘ಸ್ವರ್ಣಗಿರಿ’!

ಈ ಯೋಜನೆಯ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಆಂಧ್ರ ಸರ್ಕಾರವು ‘ಜೊನ್ನಗಿರಿ’ ಗ್ರಾಮದ ಹೆಸರನ್ನು ‘ಸ್ವರ್ಣಗಿರಿ’ ಎಂದು ಮರುನಾಮಕರಣ ಮಾಡಿದೆ. ಮೌರ್ಯರ ಶಾಸನಗಳಲ್ಲೂ ಇದನ್ನು ‘ಸುವರ್ಣಗಿರಿ’ ಎಂದೇ ಕರೆಯಲಾಗುತ್ತಿತ್ತು. ಇದರೊಂದಿಗೆ, ಸ್ಥಳೀಯವಾಗಿ ಆಭರಣ ತಯಾರಿಕೆಗೆ ಉತ್ತೇಜನ ನೀಡಲು ಇಲ್ಲಿ ಬೃಹತ್ ‘ಚಿನ್ನದ ಆಭರಣ ತಯಾರಿಕಾ ಪಾರ್ಕ್’ ಸ್ಥಾಪಿಸುವುದಾಗಿ ಸಿಎಂ ನಾಯ್ಡು ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !