October 25, 2026
Sunday, October 25, 2026
spot_img

ಜಾಗತಿಕ ವಿಜ್ಞಾನ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಪ್ರತಿಷ್ಠಿತ ‘ಆಸ್ಕರ್ ಕ್ಲೈನ್ ಪದಕ’ಕ್ಕೆ ಭಾಜನರಾದ ಭೌತಶಾಸ್ತ್ರಜ್ಞ ಅಶೋಕ್ ಸೇನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಾಗತಿಕ ವಿಜ್ಞಾನ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ: ಪ್ರತಿಷ್ಠಿತ ‘ಆಸ್ಕರ್ ಕ್ಲೈನ್ ಪದಕ’ಕ್ಕೆ ಭಾಜನರಾದ ಭೌತಶಾಸ್ತ್ರಜ್ಞ ಅಶೋಕ್ ಸೇನ್

ಸೈದ್ಧಾಂತಿಕ ಭೌತಶಾಸ್ತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಖ್ಯಾತ ಭಾರತೀಯ ವಿಜ್ಞಾನಿ ಅಶೋಕ್ ಸೇನ್ ಅವರಿಗೆ ಪ್ರತಿಷ್ಠಿತ ‘ಆಸ್ಕರ್ ಕ್ಲೈನ್ ಪದಕ’ ಲಭಿಸಿದೆ.

ಈ ಗೌರವ ಪಡೆದ ಮೊದಲ ಭಾರತೀಯ ಭೌತಶಾಸ್ತ್ರಜ್ಞ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಬೆಂಗಳೂರಿನ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸಸ್‌ (ICTS)ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸೇನ್ ಅವರ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸ್ಟ್ರಿಂಗ್ ಥಿಯರಿಯಲ್ಲಿ ಮಹತ್ವದ ಕೊಡುಗೆ

ಅಶೋಕ್ ಸೇನ್ ಅವರು ಆಧುನಿಕ ಭೌತಶಾಸ್ತ್ರದ ಪ್ರಮುಖ ಸಂಶೋಧನಾ ಕ್ಷೇತ್ರವಾದ ಸ್ಟ್ರಿಂಗ್ ಥಿಯರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಸ್-ಡ್ಯುಯಾಲಿಟಿ, ಕಪ್ಪು ಕುಳಿಗಳ ಎಂಟ್ರೊಪಿಯ ನಿಖರ ಗಣನೆ ಹಾಗೂ ಸ್ಟ್ರಿಂಗ್ ಫೀಲ್ಡ್ ಥಿಯರಿಗೆ ಸಂಬಂಧಿಸಿದ ಅವರ ಸಂಶೋಧನೆಗಳು ಈ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ. ಅವರು ICTS-ಇನ್ಫೋಸಿಸ್ ಮಾಧವ ಚೇರ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:

2026ರ ಆಸ್ಕರ್ ಕ್ಲೈನ್ ಸ್ಮರಣಾರ್ಥ ಉಪನ್ಯಾಸವನ್ನು ಅಕ್ಟೋಬರ್ 22ರಂದು ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದ ಆಲ್ಬಾನೋವಾ ಕೇಂದ್ರದಲ್ಲಿ ಸೇನ್ ನೀಡಿದ್ದರು. ‘ಗ್ರಾವಿಟಿ ಫ್ರಮ್ ಸ್ಟ್ರಿಂಗ್ಸ್ ಅಂಡ್ ಸ್ಟ್ರಿಂಗ್ಸ್ ಫ್ರಮ್ ಗ್ರಾವಿಟಿ’ ಎಂಬುದು ಅವರ ಉಪನ್ಯಾಸದ ವಿಷಯವಾಗಿತ್ತು.

ಪ್ರಶಸ್ತಿಗಳ ಸರಮಾಲೆಯಲ್ಲಿ ಮತ್ತೊಂದು ಗರಿ

ಸೇನ್ ಅವರ ಸಾಧನೆಗೆ ಈ ಹಿಂದೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳು ಸಂದಿವೆ. 2012ರಲ್ಲಿ ಮೂಲಭೂತ ಭೌತಶಾಸ್ತ್ರದ ಬ್ರೇಕ್‌ಥ್ರೂ ಪ್ರಶಸ್ತಿ ಹಾಗೂ 2014ರಲ್ಲಿ ಡಿರಾಕ್ ಪದಕ ಪಡೆದಿದ್ದಾರೆ. ಗಣಿತ ವಿಜ್ಞಾನ ಕ್ಷೇತ್ರದ ಇನ್ಫೋಸಿಸ್ ಪ್ರಶಸ್ತಿ, ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳೂ ಅವರಿಗೆ ಲಭಿಸಿವೆ. 2001ರಲ್ಲಿ ಪದ್ಮಶ್ರೀ ಮತ್ತು 2013ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ. 1998ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿಯೂ ಆಯ್ಕೆಯಾಗಿದ್ದರು.

Must Read

Skip to toolbar