October 25, 2026
Sunday, October 25, 2026
spot_img

ಹಬ್ಬದ ಖರೀದಿಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ; ಸ್ವಾವಲಂಬಿ ಭಾರತದ ಕನಸು ನನಸಾಗಲಿ: ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಬ್ಬದ ಸಂಭ್ರಮದ ನಡುವೆ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರ ಪರಿಶ್ರಮಕ್ಕೆ ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರಿಂದ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಮತ್ತಷ್ಟು ಬಲ ಸಿಗಲಿದ್ದು, ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸಲು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿ, ಭಾರತೀಯ ಉತ್ಪನ್ನಗಳು ವಿದೇಶಿ ಮಾರುಕಟ್ಟೆಗಳಿಗೂ ತಲುಪುತ್ತಿರುವುದನ್ನು ಉಲ್ಲೇಖಿಸಿದರು. ಬಿಹಾರದ ಮಖಾನಾ ಗ್ರೀಸ್‌ಗೆ ತಲುಪುತ್ತಿದ್ದರೆ, ಕರ್ನಾಟಕದ ತೊಗರಿ ಬೇಳೆ ಮಾಲ್ಡೀವ್ಸ್‌ಗೆ ರಫ್ತಾಗುತ್ತಿದೆ. ಇದರಿಂದ ಭಾರತೀಯ ರೈತರಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ ಎಂದು ಹೇಳಿದರು.

ಸ್ಥಳೀಯ ಉತ್ಪನ್ನಗಳಿಗೆ ಆಕರ್ಷಕ ಪ್ಯಾಕೇಜಿಂಗ್ ಅಗತ್ಯ

ಹಬ್ಬಗಳ ಸಂದರ್ಭದಲ್ಲಿ ಕುಟುಂಬದವರು ಹಾಗೂ ಸ್ನೇಹಿತರಿಗಾಗಿ ಅನೇಕ ವಸ್ತುಗಳನ್ನು ಖರೀದಿಸುತ್ತೇವೆ. ಈ ವೇಳೆ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ವಸ್ತುಗಳಿಗೆ ಆದ್ಯತೆ ನೀಡಿದರೆ ಅವರ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ಮೋದಿ ತಿಳಿಸಿದರು. ಉತ್ಪನ್ನಗಳ ಗುಣಮಟ್ಟದ ಜೊತೆಗೆ ಆಕರ್ಷಕ ಪ್ಯಾಕೇಜಿಂಗ್‌ಗೂ ಮಹತ್ವ ನೀಡಬೇಕು. ಉತ್ತಮ ಪ್ಯಾಕೇಜಿಂಗ್ ಗ್ರಾಹಕರ ಗಮನ ಸೆಳೆದು ಉತ್ಪನ್ನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ ಎಂದರು.

ಇದನ್ನೂ ಓದಿ:

ಸಾಂಪ್ರದಾಯಿಕ ಕೃಷಿ, ನೇಕಾರಿಕೆಗೆ ಹೊಸ ಚೈತನ್ಯ

ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ನೈಸರ್ಗಿಕ ಹತ್ತಿ ಕೃಷಿಯನ್ನು ಉತ್ತೇಜಿಸಲು ‘ಖೇತಿ ವಿರಾಸತ್ ಮಿಷನ್’ ಸಂಸ್ಥೆ ‘ನವ್-ತ್ರಿಂಜನ್’ ಯೋಜನೆ ಆರಂಭಿಸಿದೆ. ಹೊಸ ತಲೆಮಾರಿಗೆ ನೇಕಾರಿಕೆ ಕೌಶಲ ಪರಿಚಯಿಸುವ ಉದ್ದೇಶದಿಂದ ನೇಕಾರಿಕೆ ಶಾಲೆಯನ್ನೂ ಸ್ಥಾಪಿಸಲಾಗಿದೆ ಎಂದು ಮೋದಿ ವಿವರಿಸಿದರು.

ನದಿಗಳ ಪುನಶ್ಚೇತನಕ್ಕೆ ಜನರ ಕೈಜೋಡಿಕೆ

ಉತ್ತರಾಖಂಡದ ಹೆವಲ್ ನದಿಯನ್ನು ಉಳಿಸಲು ಸ್ಥಳೀಯರು ಮತ್ತು ಆಡಳಿತ ಕೈಗೊಂಡ ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ ಹಾಗೂ ಮರ ನೆಡುವ ಕಾರ್ಯಗಳಿಂದ ನದಿ ಮತ್ತು ನೈಸರ್ಗಿಕ ಜಲಮೂಲಗಳಿಗೆ ಹೊಸ ಜೀವ ಸಿಕ್ಕಿದೆ ಎಂದು ಹೇಳಿದರು.

ಇದೇ ವೇಳೆ, ‘ಇ-ಸಂಜೀವನಿ’ ಸೇವೆಯ ಮೂಲಕ ಇದುವರೆಗೆ ಸುಮಾರು 50 ಕೋಟಿ ಟೆಲಿ-ಸಮಾಲೋಚನೆಗಳು ನಡೆದಿವೆ ಎಂದು ತಿಳಿಸಿದರು.

Must Read

Skip to toolbar