Tuesday, September 27, 2022

Latest Posts

ಭಾರತದ ಸೆಮಿಕಂಡಕ್ಟರ್ ಆತ್ಮನಿರ್ಭರತೆ ಯಾನ ಶುರುವಾಗ್ತಿದೆ ಗುಜರಾತಿನಿಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆತ್ಮನಿರ್ಭರ ಭಾರತದ ಅಡಿಯಲ್ಲಿ ಸೆಮಿಕಂಡಕ್ಟರ್‌ ಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವ ಭಾರತದ ಕನಸಿಗೆ ಪೂರಕವಾಗಿ ಗುಜರಾತ್‌ ನಲ್ಲಿ ಸೆಮಿಕಂಡಕ್ಟರ್‌ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಈ ಕುರಿತು ಭಾರತದ ಪ್ರಸಿದ್ಧ ಕಂಪನಿಯಾದ ವೇದಾಂತ ಹಾಗೂ ತೈವಾನ್‌ ಮೂಲದ ಸೆಮಿಕಂಡಕ್ಟರ್‌ ಉತ್ಪಾದಕ ಫಾಕ್ಸ್‌ಕಾನ್ ಕಂಪನಿಗಳ ನಡುವೆ ಒಪ್ಪಂದವಾಗಿದ್ದು ವೇದಾಂತ-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರವನ್ನು ಗುಜರಾತಿನಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ವೇದಾಂತ ಕಂಪನಿಯ ಅಧ್ಯಕ್ಷ ಅನಿಲ್‌ ಅಗರ್‌ ವಾಲ್‌ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ಸೆಮಿಕಂಡಕ್ಟರ್‌ ಸ್ಥಾವರ ನಿರ್ಮಿಸಲು ವೇದಾಂತವು 1.54 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದು ಇದು ಭಾರತದ ಆತ್ಮನಿರ್ಭರ ಸಿಲಿಕಾನ್‌ ವ್ಯಾಲಿಯ ಕನಸನ್ನು ನಿಜವಾಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಈ ಸ್ಥಾವರ ನಿರ್ಮಾಣವು ಭಾರತದ ಎಲೆಕ್ಟ್ರಾನಿಕ್ಸ್‌ ಆಮದುಗಳನ್ನು ಕಡಿಮೆ ಮಾಡಲಿದೆ. ಹಾಗೂ ಸುಮಾರು 1 ಲಕ್ಷ ನೇರ ಉದ್ಯೋಗಾವಕಾಶಗಳನ್ನು ತೆರೆದಿಡಲಿದೆ. ಅಲ್ಲದೇ ದೇಶದ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡಲಿದೆ.

ಈ ಕುರಿತು ಪ್ರಧಾನಿ ಮೋದಿಯವರೂ ಕೂಡ ಟ್ವೀಟ್‌ ಮಾಡಿದ್ದು “ಈ ತಿಳುವಳಿಕಾ ಒಪ್ಪಂದವು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸುವ ಪ್ರಮುಖ ಹಂತವಾಗಿದೆ. 1.54 ಲಕ್ಷ ಕೋಟಿ ಹೂಡಿಕೆಯು ಆರ್ಥಿಕತೆ ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಗಮನಾರ್ಹ ಪರಿಣಾಮವನ್ನು ಉಂಟುಮಾಡುತ್ತದೆ. ಇದು ಪೂರಕ ಕೈಗಾರಿಕೆಗಳಿಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ನಮ್ಮ MSME ಗಳಿಗೆ ಸಹಾಯ ಮಾಡುತ್ತದೆ” ಎಂದು ಹೇಳಿದ್ಧಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!