ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿ ಇಂದು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತಿದೆ. ಅಂಬೇಡ್ಕರ್ ಜಯಂತಿಯಂದೇ ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಅನಾವರಣಗೊಳಿಸಲಿದ್ದಾರೆ.
ನಗರದ ಹೃದಯ ಭಾಗ, ಹುಸೇನ್ ಸಾಗರ್ ಸರೋವರದ ಬಳಿ 125 ಅಡಿ ಎತ್ತರದ ಪ್ರತಿಮೆ ತಲೆಯೆತ್ತಿದೆ. ಪ್ರತಿಮೆ ಅನಾವರಣಕ್ಕಾಗಿ ಬೃಹತ್ ಕ್ರೇನ್ ಬಳಕೆ ಮಾಡಲಾಗಿದ್ದು, ಮೂರ್ತಿಯ ಮೇಲಿನ ಪರದೆ ತೆರೆದು ಗುಲಾಬಿ, ಸೇವಂತಿಗೆ ಹಾಗೂ ವಿಳೇದೆಲೆಯ ಹಾರವನ್ನು ಹಾಕಲಾಗುವುದು. ನಂತರ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲು ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಗುವುದು.
ಪ್ರತಿಮೆ ಅನಾವರಣಕ್ಕಾಗಿ ಬೌಧ್ಧ ಸನ್ಯಾಸಿಗಳನ್ನು ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ನಿರ್ಧಾರದ ನಂತರ ಎರಡು ವರ್ಷಗಳಲ್ಲಿ ಪ್ರತಿಮೆ ತಯಾರಾಗಿದೆ.
ಪ್ರತಿಮೆ ಅನಾವರಣಕ್ಕೆ 35 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದ್ದು, 750 ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಆಹಾರ, ಸಿಹಿ ತಿಂಡಿ ಹಾಗೂ ನೀರಿನ ಬಾಟೆಲ್ ವ್ಯವಸ್ಥೆ ಇದೆ.