ವಿಶೇಷ ಚೇತನ ಮಗು ವಿಮಾನ ಪ್ರಯಾಣ ನಿರಾಕರಿಸಿದ ಇಂಡಿಗೋ ಸಂಸ್ಥೆ; ತನಿಖೆಗೆ ಆದೇಶಿಸಿದ ವಿಮಾನಯಾನ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಮಗುವೊಂದನ್ನು ವಿಮಾನದೊಳಗೆ ಹತ್ತಿಸಿಕೊಳ್ಳಲು ಇಂಡಿಗೋ ವಿಮಾನಯಾನ ಸಂಸ್ಥೆ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದ್ದು, ಜನರ ಆಕ್ರೋಶ ಭುಗಿಲೆದ್ದಿದೆ.
ವಾರಾಂತ್ಯ ದಿನದಲ್ಲಿ ಕುಟುಂಬಸ್ಥರೊಂದಿಗೆ ರಾಂಚಿ ವಿಮಾನ ನಿಲ್ದಾಣಕ್ಕೆ ಬಂದ ಮಗು ಹೈದರಾಬಾದ್‌ ಗೆ ಪ್ರಯಾಣಿಸಬೇಕಿತ್ತು. ಆದರೆ ಮಗುವನ್ನು ವಿಮಾನಗೊಳಗೆ ಹತ್ತಿಸಿಕೊಳ್ಳಲು ಇಂಡಿಗೋ ಸಿಬ್ಬಂದಿ ನಿರಾಕರಿಸಿದರು. ಸಹ ಪ್ರಯಾಣಿಕ ಮನಿಶಾ ಗುಪ್ತಾ ಅವರು ಇಡೀ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ವಿವರವಾಗಿ ವಿವರಿಸಿದ್ದಾರೆ. ಈ ಫೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಜನರು ವಿಮಾನಯಾನ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಸಿಬ್ಬಂದಿಯ ಅಮಾನವೀಯ ನಡವಳಿಕೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತಾಗಿ ಡಿಜಿಸಿಎ ಈಗಾಗಲೆ ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆಯ ಕುರಿತಾಗಿ ಈ ಕೂಡಲೇ ವರದಿ ಸಲ್ಲಿಸುವಂತೆ ಸಲ್ಲಿಸಲು ಇಂಡಿಗೋ ಸಂಸ್ಥೆಗೆ ಸೂಚಿಸಿದೆ.
ಮತ್ತೊಂದೆಡೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಹ ಘಟನೆಯ ಕುರಿತಾಗಿ ಟ್ವಿಟ್‌ ಮಾಡಿದ್ದಾರೆ. ಇಂತಹ ನಡವಳಿಕೆಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಯಾವ ಮನುಷ್ಯನಿಗೂ ಇಂತಹ ಸ್ಥಿತಿ ಎದುರಾಗಬಾರದು. ಈ ಬಗ್ಗೆ ಸ್ವತಃ ನಾನೇ ತನಿಖೆ ನಡೆಸುತ್ತೇನೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಆದರೆ ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನಸಿಬ್ಬಂದಿಯ ನಡವಳಿಕೆಯನ್ನು ಸಮರ್ಥಿಸಿಕೊಂಡಿದೆ. ವಿಶೇಷ ಚೇತನ ಮಗುವು ಹೆದರಿಕೊಂಡಿತ್ತು. ಆ ಮಗುವಿನ ವರ್ತನೆ ಇತರೆ ಪ್ರಯಾಣಿಕರ ಸುರಕ್ಷತೆಗೆ ಅಪಾಯವಾಗಿ ಪರಿಣಮಿಸಿತ್ತು. ನಾವು ನಿಯಮಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಿದ್ದೇವೆ. ಪ್ರಯಾಣಿಕರ ಮನಸ್ಥಿತಿ ಸರಿಯಾಗಿಲ್ಲದಾಗ ಮತ್ತು ಕುಡುಕ ಪ್ರಯಾಣಿಕರು ಪ್ರಯಾಣಿಸಲು ಅನರ್ಹರು ಎಂದು ನಿಯಮಗಳು ಹೇಳುತ್ತವೆ. ಎಲ್ಲರನ್ನೂ ಒಳಗೊಳ್ಳುವ ನಡವಳಿಕೆ ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಅದರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಸಂಸ್ಥೆ ಹೇಳಿದೆ.
ಮಗುವಿನ ಪ್ರಯಾಣದಿಂದ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಹ-ಪ್ರಯಾಣಿಕರು ಮಗುವಿನ ಪೋಷಕರಿಗೆ ಬೆಂಬಲವಾಗಿ ಬಂದು ಸಿಬ್ಬಂದಿಗೆ ಭರವಸೆ ನೀಡಿದರೂ ಎಲ್ಲಾ ವಿನಂತಿಗಳು ಮತ್ತು ಮನವಿಗಳು ವ್ಯರ್ಥವಾಯಿತು. ಮಗು ಮತ್ತು ಪೋಷಕರು ಸೇರಿದಂತೆ ಮೂವರು ಪ್ರಯಾಣಿಕರನ್ನು ಬಿಟ್ಟು ವಿಮಾನವು ಹೈದರಾಬಾದ್‌ಗೆ ಹಾರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!