ಇಂಡೊ-ಫೆಸಿಫಿಕ್ ಭಾಗದಲ್ಲಿ ಹೀಗೆ ಬಲಗೊಳ್ಳಲಿದೆ ಭಾರತ-ಅಮೆರಿಕ ಬಂಧ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ-ಅಮೆರಿಕಗಳ 2+2 ಸಮಾಲೋಚನೆ ರಷ್ಯ, ಮಾನವ ಹಕ್ಕು ಇತ್ಯಾದಿಗಳ ವಿಷಯದಲ್ಲಿ ಸದ್ದು ಮಾಡಿತು. ಆದರೆ ಇವೆಲ್ಲದರ ಹೊರತಾಗಿ ಭಾರತ ಮತ್ತು ಅಮೆರಿಕಗಳ ಬಂಧ ಗಟ್ಟಿಯಾಗುವುದಕ್ಕೆ ಏನು ಬೇಕೋ ಅದು ನೆರವೇರುತ್ತಿದೆ.

ಉದಾಹರಣೆಗೆ, ಇಂಡೊ-ಫೆಸಿಫಿಕ್ ನಿರ್ವಹಣೆ ಸಂಬಂಧ ಭಾರತೀಯ ಬಂದರುಗಳನ್ನು ಬಳಸಿಕೊಂಡು ಅಮೆರಿಕ ನೌಕೆಗಳ ದುರಸ್ತಿ ಮತ್ತು ನಿರ್ವಹಣೆಗೆ ಈ ಸಮಾಲೋಚನೆಯಲ್ಲಿ ಪ್ರಸ್ತಾವಿಸಲಾಗಿದೆ ಎಂದು ಅಮೆರಿಕನ್ ಮೂಲದ ಮಾಧ್ಯಮವೊಂದು ವರದಿ ಮಾಡಿದೆ.

ಯು.ಎಸ್. ಮರಿಟೈಮ್ ಸೀಲಿಫ್ಟ್ ಕಮಾಂಡ್ (ಎಂ.ಎಸ್.ಸಿ) ನೌಕೆಗಳ ನಿರ್ವಹಣೆ ಮತ್ತು ದುರಸ್ಥಿಗಾಗಿ ಭಾರತೀಯ ಬಂದರುಗಳನ್ನು ಬಳಸಿಕೊಳ್ಳುವ  ಬಗ್ಗೆ ಚಿಂತಿಸಲಾಗುತ್ತಿದೆ.

“ರಕ್ಷಣಾ ಕೈಗಾರಿಕಾ ಕ್ಷೇತ್ರದ ನೌಕಾ ವಲಯದಲ್ಲಿ ಮತ್ತಷ್ಟು ಸಹಕಾರವನ್ನು ಹೆಚ್ಚಿಸಲು ಹಾಗೂ ಎಂ.ಎಸ್.ಸಿ ನೌಕೆಗಳ ಮಾರ್ಗಮಧ್ಯದ ನಿರ್ವಹಣೆ ಮತ್ತು ದುರಸ್ಥಿಗಾಗಿ ಭಾರತೀಯ ಬಂದರುಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿಗೆ ಉಭಯ ದೇಶಗಳು ಸಹಮತ ವ್ಯಕ್ತಪಡಿಸಿವೆ” ಎಂಬುದು ಅಮೆರಿಕ ಸರ್ಕಾರದಿಂದ ಬಂದಿರುವ ವಿವರಣೆ.

“ಮರಿಟೈಮ್ ಸೀಲಿಫ್ಟ್ ಕಮಾಂಡ್ (ಎಂ.ಎಸ್.ಸಿ) ತನ್ನ ನೌಕೆಗಳ ನಿರ್ವಹಣೆಗಾಗಿ ಈಗಾಗಲೇ ಜಗತ್ತಿನ ವಿವಿಧ ಭಾಗಗಳಲ್ಲಿರುವ ಬಂದರುಗಳನ್ನು ಉಪಯೋಗಿಸಿ ಕೊಳ್ಳುತ್ತಿದೆ. ಪ್ರಸ್ತುತ ಮಧ್ಯ ಪ್ರಾಚ್ಯ ಮತ್ತು ಸಿಂಗಪೂರ್ ಗಳ ಕಡಲತೀರಗಳನ್ನು ಉಪಯೋಗಿಸಲಾಗುತ್ತಿದ್ದು ಆದರೂ ಕಡಲ ತೀರಗಳ ಕೊರತೆ ಎದುರಿಸಲಾಗುತ್ತಿದೆ. ಭಾರತದ ಕಡಲ ತೀರವು ಇದಕ್ಕೆ ಪೂರಕವಾಗಲಿದ್ದು ಇಂಡೋ ಫೆಸಿಫಿಕ್ ಭಾಗದಲ್ಲಿ ಅಮೇರಿಕದ ನೌಕಾಪಡೆಗೆ ವರದಾನವಾಗಲಿದೆ.” ಎಂಬುದು ವಿಶ್ಲೇಷಕರ ಅಭಿಪ್ರಾಯ.

ಈ ಸಂದರ್ಭದಲ್ಲಿ ಯು.ಎಸ್ ಮತ್ತು ಭಾರತವು ’ಮಲಬಾರ’ ಮತ್ತು ’ಮಿಲನ್‌’ನಂತಹ ನೌಕಾ ಸಮರಾಭ್ಯಾಸಗಳ ಮಹತ್ವವನ್ನು ಪುನರುಚ್ಚರಿಸಿತು ಎಂದು ಪ್ರಕಟಣೆ ತಿಳಿಸಿದೆ. ಮಲಬಾರ್ ವಾರ್ಷಿಕ ನೌಕಾ ಸಮರಾಭ್ಯಾಸವಾಗಿದ್ದು, ಯುಎಸ್, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್  ಈ ನಾಲ್ಕು ದೇಶಗಳು ಭಾಗವಹಿಸುತ್ತವೆ. ಇದನ್ನೇ ’ಕ್ವಾಡ್’ ಎಂದು ಕರೆಯಲಾಗುತ್ತದೆ. ಮಿಲನ್ ಎಂಬುದು ಭಾರತವು ಆಯೋಜಿಸುವ ದ್ವೈವಾರ್ಷಿಕ ನೌಕಾ ಸಮರಾಭ್ಯಾಸವಾಗಿದ್ದು ಯು.ಎಸ್. ನೌಕಾಪಡೆಯು ಈ ವರ್ಷ ಮೊದಲ ಬಾರಿಗೆ ಮಿಲನ್‌ನಲ್ಲಿ ಭಾಗವಹಿಸಲು ಪ್ರಾರಂಭಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!