October 8, 2026
Thursday, October 8, 2026
spot_img

INFORMATION | ನಿಮ್ಮ ಫ್ಲೈಟ್ ಮಿಸ್ ಆಯ್ತಾ? ಕಂಗಾಲಾಗಬೇಡಿ, ಪ್ರಯಾಣಿಕರ ಈ ಹಕ್ಕುಗಳ ಬಗ್ಗೆ ನಿಮಗೆ ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಫ್ಲೈಟ್ ಕ್ಯಾನ್ಸಲ್ ಆಗಿದೆ ಅಥವಾ ತಡವಾಗಿದೆ ಎಂಬ ಸುದ್ದಿ ಕೇಳಿದರೆ ಯಾರಿಗಾದರೂ ಕಿರಿಕಿರಿಯಾಗುವುದು ಸಹಜ. ಆದರೆ, ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನಿಯಮಗಳ ಪ್ರಕಾರ, ಇಂತಹ ಸಮಯದಲ್ಲಿ ಏರ್‌ಲೈನ್ ಸಂಸ್ಥೆಗಳು ಪ್ರಯಾಣಿಕರಿಗೆ ಹಲವು ಸೌಲಭ್ಯ ಹಾಗೂ ಪರಿಹಾರಗಳನ್ನು ನೀಡುವುದು ಕಡ್ಡಾಯ.

ಉಚಿತ ಉಪಹಾರ

ನಿಮ್ಮ ವಿಮಾನವು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾದರೆ, ಕಾಯುತ್ತಿರುವ ಸಮಯದಲ್ಲಿ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ಉಚಿತವಾಗಿ ತಿಂಡಿ, ಊಟ ಹಾಗೂ ನೀರನ್ನು ಒದಗಿಸಬೇಕು.

ಹೊಟೇಲ್ ವಾಸ್ತವ್ಯ

ವಿಮಾನವು 24 ಗಂಟೆಗಿಂತ ಹೆಚ್ಚು ತಡವಾದರೆ ಅಥವಾ ರಾತ್ರಿ 8 ರಿಂದ ಬೆಳಗಿನ ಜಾವ 3 ಗಂಟೆಯ ನಡುವೆ ಹೊರಡಬೇಕಿದ್ದ ಫ್ಲೈಟ್ 6 ಗಂಟೆಗಿಂತ ಹೆಚ್ಚು ತಡವಾದರೆ, ಏರ್‌ಲೈನ್ ಸಂಸ್ಥೆಯು ಪ್ರಯಾಣಿಕರಿಗೆ ಉಚಿತ ಹೊಟೇಲ್ ಕೊಠಡಿ ಮತ್ತು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಹೋಗಿ ಬರಲು ಉಚಿತ ಕಾರು ಸೌಲಭ್ಯ ನೀಡಬೇಕು.

ಹಣ ಮರುಪಾವತಿ

ಫ್ಲೈಟ್ ರದ್ದಾದರೆ ಅಥವಾ ವಿಮಾನವು 6 ಗಂಟೆಗಿಂತ ಹೆಚ್ಚು ತಡವಾದರೆ, ಪ್ರಯಾಣಿಕರಿಗೆ ಎರಡು ಆಯ್ಕೆಗಳಿರುತ್ತವೆ. ನೀವು ಟಿಕೆಟ್‌ನ ಪೂರ್ಣ ಹಣವನ್ನು ವಾಪಸ್ ಪಡೆಯಬಹುದು ಅಥವಾ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮುಂದಿನ ಲಭ್ಯವಿರುವ ವಿಮಾನದಲ್ಲಿ ಪ್ರಯಾಣಿಸಬಹುದು.

ನಗದು ಪರಿಹಾರ

ವಿಮಾನ ಸಂಸ್ಥೆಯು ಮುಂಚಿತವಾಗಿ ಮಾಹಿತಿ ನೀಡದೆ (24 ಗಂಟೆಯ ಒಳಗೆ) ಹಠಾತ್ತಾಗಿ ಫ್ಲೈಟ್ ರದ್ದುಗೊಳಿಸಿದರೆ, ನಿಗದಿತ ನಿಯಮಗಳ ಪ್ರಕಾರ ಪ್ರಯಾಣಿಕರಿಗೆ 5,000 ದಿಂದ 20,000 ವರೆಗೆ ನಗದು ಪರಿಹಾರ ನೀಡಬೇಕಾಗುತ್ತದೆ.

ನೆನಪಿರಲಿ

ಹವಾಮಾನ ವೈಪರೀತ್ಯ, ಸುರಕ್ಷತಾ ಸಮಸ್ಯೆಗಳು ಅಥವಾ ವಾಯು ಸಂಚಾರ ನಿಯಂತ್ರಣ ನೀಡುವ ತುರ್ತು ಸೂಚನೆಗಳಿಂದ ವಿಮಾನ ತಡವಾದರೆ ನಗದು ಪರಿಹಾರ ಸಿಗುವುದಿಲ್ಲ. ಆದರೂ ಉಚಿತ ಊಟ ಮತ್ತು ಪರ್ಯಾಯ ಪ್ರಯಾಣದ ಸೌಲಭ್ಯವನ್ನು ಕಂಪನಿ ಒದಗಿಸಲೇಬೇಕು. ಒಂದು ವೇಳೆ ಏರ್‌ಲೈನ್ಸ್ ಸ್ಪಂದಿಸದಿದ್ದರೆ, ನೀವು ಭಾರತ ಸರ್ಕಾರದ ‘AirSewa’ ಪೋರ್ಟಲ್‌ನಲ್ಲಿ ದೂರು ನೀಡಬಹುದು.

Must Read