ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೋದ್ದಿಮೆಗಳು ಮತ್ತು ಯುವಕರೆಲ್ಲ ಬಿಲಿಯನ್ ಡಾಲರ್ ಮೌಲ್ಯದ ಕಂಪನಿ ಕಟ್ಟುತ್ತಿರುವ ಕಾಲಘಟ್ಟದಲ್ಲಿ, ಭಾರತದಲ್ಲಿ ಸಾಫ್ಟವೇರ್ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಇನ್ಫೋಸಿಸ್ ನಲ್ವತ್ತು ವಸಂತಗಳನ್ನು ಆಚರಿಸಿಕೊಳ್ಳುತ್ತಿದೆ. ಇವತ್ತಿನ ಫಂಡ್ ಎತ್ತುವ ಕಾಲಕ್ಕಿಂತ ಭಿನ್ನವಾದ, ಸಂಸ್ಥಾಪಕರೇ ತಮ್ಮ ಹಣ-ಶ್ರಮಗಳನ್ನು ತೇಯ್ದು ಕಟ್ಟುವ ಕಾಲಘಟ್ಟದಲ್ಲಿ ಬೆಳೆದು ನಿಂತಿದ್ದು ಇನ್ಫೋಸಿಸ್.
ಇವತ್ತಿನ ಬಿಲಿಯನ್ ಡಾಲರ್ ಮೌಲ್ಯದ ಪ್ರಚಾರ ಪಡೆಯುತ್ತಿರೋ ಕಂಪನಿಗಳು ಇನ್ಫೋಸಿಸ್ ರೀತಿಯಲ್ಲಿ ದೀರ್ಘಾವಧಿಯ ಸಂಸ್ಥೆಯಾಗಿ ಬೆಳೆಯಬಲ್ಲವೇ? ಇನ್ಫೋಸಿಸ್ ಸಂಸ್ಥೆಯ 40ನೇ ವರ್ಷಾಚರಣೆಯ ವೇದಿಕೆಯಲ್ಲಿ ನಂದನ ನಿಲೇಕಣಿಯವರಿಗೆ ಈ ಪ್ರಶ್ನೆ ಎದುರಾಯ್ತು.
ನಂದನ ನಿಲೇಕಣಿ ಹೇಳೋದಿಷ್ಟು- ಈಗಿನ ನವೋದ್ದಿಮೆ ಕಾಲಘಟ್ಟದ ಸಂಸ್ಥಾಪಕರ ಪೈಕಿ ಹಲವು ಯುವಕರ ಬಿಸಿನೆಸ್ ಕಾರ್ಯತಂತ್ರ, ಅವರಿಗಿರುವ ಮಹಾತ್ವಾಕಾಂಕ್ಷೆ ಇಂಥ ಗುಣಗಳೆಲ್ಲ ಇವರನ್ನು ಪ್ರಭಾವಿಸಿವೆ. ಆದರೆ, ನಿಲೇಕಣಿ ಅವರಿಗಿರುವ ಆತಂಕ ಎಂದರೆ ಸುಲಭವಾಗಿ ಹರಿದುಬರುತ್ತಿರುವ ಹಣದ್ದು. ಇವರೆಲ್ಲ ನಿಜಕ್ಕೂ ಒಂದು ಸಂಸ್ಥೆಯನ್ನು ಬೆಳೆಸಬಲ್ಲರೇ? ಏಕೆಂದರೆ ಸಂಸ್ಥೆ ಕಟ್ಟುವ ಕೆಲಸ ಕಷ್ಟದಾಯಕ ಮತ್ತದು ಮ್ಯಾರಥಾನ್ ಓಟವಿದ್ದಂತೆ. ಇನ್ಫೋಸಿಸ್ ಇವತ್ತಿಗೂ ಬೆಳವಣಿಗೆ ಪಥದಲ್ಲಿ ಹೋಗುತ್ತಿರುವುದಕ್ಕೆ ಕಾರಣ, 40 ವರ್ಷಗಳ ಹಿಂದೆ ಹಾಕಿದಷ್ಟೇ ಶ್ರಮ ಮತ್ತು ಆಸಕ್ತಿಗಳಿಂದ ಇಲ್ಲಿನ ನಾಯಕತ್ವ ತೊಡಗಿಸಿಕೊಂಡಿರೋದು. ಈಗಿನ ನವೋದ್ದಿಮೆಯ ಯುವಕರ ಬಳಿ ಈ ದೀರ್ಘಾವಧಿ ಆಟಕ್ಕೆ ಬೇಕಾದ ಶಕ್ತಿ ಉಳಿದುಕೊಳ್ಳುತ್ತದೆಯೇ? ಏಕೆಂದರೆ ಪ್ರಾರಂಭದಲ್ಲಿ ಹಣದ ಭಾರಿ ಲಭ್ಯತೆ ಒಂದು ಶಾಪ ಎಂದು ವಿಶ್ಲೇಷಿಸಿದ್ದಾರೆ ನಂದನ ನಿಲೇಕಣಿ.
ಇದೇ ವೇಳೆ ಮಾತನಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರೂ ಕೂಡ ನಿಲೇಕಣಿಯವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು “ಹೊಸ ಉದ್ದಿಮೆದಾರರು ತಮ್ಮ ಗಮನವನ್ನು ಪುನರಾವರ್ತಿತ ಗ್ರಾಹಕರನ್ನು ಪಡೆಯುವುದು, ಉತ್ತಮ ಉದ್ಯೋಗಿಗಳನ್ನು ಆಕರ್ಷಿಸುವುದು, ದೀರ್ಘಾವಧಿಯ ಹೂಡಿಕೆದಾರರನ್ನು ಆಕರ್ಷಿಸುವುದು, ಸಮಾಜ, ಅಧಿಕಾರಶಾಹಿ ಇತ್ಯಾದಿಗಳ ಅನುಮೋದನೆಯನ್ನು ಪಡೆಯುವುದರತ್ತ ಗಮನ ಹರಿಸಬೇಕು, ಪ್ರತಿ ಪಾಲುದಾರರ ಗೌರವವನ್ನು ಹೇಗೆ ಗಳಿಸುವುದು ಎಂಬುದರ ಕುರಿತು ಯೋಚಿಸಬೇಕು” ಎಂಬ ಸಲಹೆ ನೀಡಿದ್ದಾರೆ.