ಇನ್ಫೋಸಿಸ್ ಪ್ರಶಸ್ತಿ 2023: ಆರು ಸಾಧಕರ ಹೆಸರು ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇನ್ಫೋಸಿಸ್ ಸೈನ್ಸ್ ಫೌಂಡೇಶನ್ (ಐಎಸ್‌ಎಫ್) ಭಾರತದಲ್ಲಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಆರು ವ್ಯಕ್ತಿಗಳಿಗೆ ಇನ್ಫೋಸಿಸ್ ಪ್ರಶಸ್ತಿ 2023 ಅನ್ನು ಬುಧವಾರ ಪ್ರಕಟಿಸಿದೆ.

ಜನವರಿ 13ರಂದು ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಎಂಬ ಆರು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಚಿನ್ನದ ಪದಕ, ಪ್ರಶಸ್ತಿ ಪತ್ರ ಮತ್ತು ಸುಮಾರು 83 ಲಕ್ಷ ರೂಪಾಯಿ (1,00,000 ಯುಎಸ್ಡಿ) ಒಳಗೊಂಡಿದೆ. ವಿಶ್ವಪ್ರಸಿದ್ಧ ಶಿಕ್ಷಣ ತಜ್ಞರು ಮತ್ತು ತಜ್ಞರನ್ನು ಒಳಗೊಂಡ ಅಂತಾರಾಷ್ಟ್ರೀಯ ಸಮಿತಿಯು ಇನ್ಫೋಸಿಸ್ ಪ್ರಶಸ್ತಿ 2023 ರ ವಿಜೇತರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಗಳಿಗೆ 224 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಆರು ಮಂದಿಯನ್ನು ಸಮಿತಿಯು ಆಯ್ಕೆ ಮಾಡಿದೆ.

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಐಐಟಿ–ಕಾನ್ಪುರದ ಸುಸ್ಥಿರ ಇಂಧನ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಚ್ಚಿದಾನಂದ ತ್ರಿಪಾಠಿ ಅವರಿಗೆ ಇನ್ಫೋಸಿಸ್-2023 ಪ್ರಶಸ್ತಿ ಘೋಷಿಸಲಾಗಿದೆ. ಸೆನ್ಸಾರ್ ಆಧಾರಿತ ವಾಯುಗುಣಮಟ್ಟ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಕೆ ಕುರಿತಾಗಿ ಇವರು ಸಂಶೋಧನೆ ನಡೆಸಿದ್ದಾರೆ.

ಮಾನವಿಕ ವಿಭಾಗದಲ್ಲಿ ಜಾಹ್ನವಿ ಫಾಲ್ಕೆ ಅವರಿಗೆ ಇನ್ಫೋಸಿಸ್ ಪ್ರಶಸ್ತಿ 2023 ದೊರೆತಿದೆ. ಜಾಹ್ನವಿ ಅವರು ಸೈನ್ಸ್ ಗ್ಯಾಲರಿ ಬೆಂಗಳೂರು ಇದರ ಸಂಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಆಧುನಿಕ ಭಾರತದ ವೈಯಕ್ತಿಕ, ಸಾಂಸ್ಥಿಕ ಹಾಗೂ ಭೌತಿಕ ವಸ್ತುಗಳ ವೈಜ್ಞಾನಿಕ ಸಂಶೋಧನೆಗಳ ಇತಿಹಾಸದ ವಿಚಾರದಲ್ಲಿ ಸಂಶೋಧನೆ ನಡೆಸಿದ್ದಾರೆ.

ಜೀವವಿಜ್ಞಾನ ವಿಭಾಗದಲ್ಲಿ ಐಐಟಿ–ಕಾನ್ಪುರದ ಬಯೋ ಎಂಜಿನಿಯರಿಂಗ್ ಮತ್ತು ಜೀವವಿಜ್ಞಾನ ಪ್ರೊಫೆಸರ್ ಅರುಣ್ ಕುಮಾರ್ ಶುಕ್ಲಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಜಿ–ಪ್ರೊಟೀನ್ ಕಪಲ್ಡ್ ರಿಸೆಪ್ಟರ್ (ಜಿಪಿಸಿಆರ್) ಜೀವವಿಜ್ಞಾನಕ್ಕೆ ಸಂಶೋಧನೆ ಕೈಗೊಂಡಿದ್ದಾರೆ.

ಗಣಿತ ವಿಜ್ಞಾನ ವಿಭಾಗದಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯ ಹಾಗೂ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್‌ ಸ್ಟಡಿ ಜಾಯಿಂಟ್ ಪ್ರೊಫೆಸರ್ ಆಗಿರುವ ಭಾರ್ಗವ್ ಭಟ್ ಅವರಿಗೆ ನೀಡಲಾಗಿದೆ. ಪ್ರೊ. ಭಟ್ ಅವರು ಜರ್ಮನಿಯ ಗಣಿತಶಾಸ್ತ್ರಜ್ಞ ಪೀಟರ್ ಶಾಲ್ಜ್‌ ಜೊತೆ ಸೇರಿ ಪ್ರಿಸ್ಮ್ಯಾಟಿಕ್ ಕೊಹೊಮಾಲಜಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭೌತ ವಿಜ್ಞಾನ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್‌ನ ಜೀವರಸಾಯನಶಾಸ್ತ್ರ, ಜೀವಭೌತವಿಜ್ಞಾನ ಮತ್ತು ಬಯೋಇನ್ಫಾರ್ಮೆಟಿಕ್ಸ್ ವಿಭಾಗದ ಪ್ರೊಫೆಸರ್ ಮುಕುಂದ್ ಥಟ್ಟೈ ಅವರನ್ನು ಇನ್ಫೋಸಿಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ವಿಕಾಸಾತ್ಮಕ ಜೀವಕೋಶ ಜೀವ ವಿಜ್ಞಾನದಲ್ಲಿ ಸಂಶೋಧನಾ ಕಾರ್ಯ ನಡೆಸುತ್ತಿದ್ದಾರೆ.

ಸಮಾಜ ವಿಜ್ಞಾನ ವಿಭಾಗದಲ್ಲಿ ಕೊಲಂಬಿಯಾ ವಿವಿಯ ರಾಜ್ಯಶಾಸ್ತ್ರದ ಪ್ರೊಫೆಸರ್ ಕರುಣಾ ಮಂತೆನಾ ಅವರನ್ನು ಆಯ್ಕೆ ಮಾಡಲಾಗಿದೆ. ಸಾಮ್ರಾಜ್ಯಶಾಹಿ ಸಿದ್ಧಾಂತವು ಆಧುನಿಕ ಸಾಮಾಜಿಕ ಸಿದ್ಧಾಂತದ ಉಗಮದಲ್ಲಿ ಅತ್ಯಂತ ಪ್ರಮುಖ ಅಂಶ ಎಂಬುದರ ಕುರಿತು ಅವರು ಸಂಶೋಧನೆ ಕೈಗೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!