ಹೊಸದಿಗಂತ ವರದಿ,ಮಾದಾಪುರ:
ಕೊಡಗು ಜಿಲ್ಲೆಯಲ್ಲಿ 2017ಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾದ ಕುಟುಂಬಗಳಿಗೆ ಮಾದಾಪುರದ ಜಂಬೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಪರಿಶೀಲಿಸಿದರು.
ಜಂಬೂರಿನಲ್ಲಿ ಗ್ರಾಮ ಲೆಕ್ಕಿಗರ ಕಾರ್ಯಾಲಯದ ಉದ್ಘಾಟನೆಯ ನಂತರ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು,ಮಳೆಹಾನಿ ಸಂತ್ರಸ್ತರಿಗೆಂದು ಇನ್ಫೋಸಿಸ್ ಸಂಸ್ಥೆ ನಿರ್ಮಿಸುತ್ತಿರುವ ಮನೆಗಳನ್ನು ಪರಿಶೀಲಿಸಿ ಗುಮಟ್ಡದ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಈ ಕಟ್ಟಡಗಳನ್ನು ಭಾಗ ಭಾಗವಾಗಿ ನಿರ್ಮಿಸಿದ್ದು, ಲಾಕ್ ಸಿಸ್ಟಮ್ ಮೂಲಕ ಜೋಡಿಸಲಾಗಿದೆ ಹಾಗೂ ಇದರ ಗುಣಮಟ್ಟದ ಕುರಿತು ಸಂಶಯವಿದೆ ಎಂದು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅನುಮಾನವನ್ನು ಶಾಸಕರು ಹಂಚಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಮಳೆಗಾಲದ ನಂತರ ಫಲಾನುಭವಿಗಳಿಗೆ ಮನೆಗಳನ್ನು ಹಂಚೋಣ. ಒಂದು ಮಳೆಗಾಲದಲ್ಲಿ ನಮಗೆ ಕಟ್ಟಡದ ಗುಣಮಟ್ಟ ತಿಳಿಯಲಿದೆ. ಈಗಲೇ ಹಸ್ತಾಂತರ ಮಾಡಿದರೆ ಸಮಸ್ಯೆ ಎದುರಾದರೆ ಕಷ್ಟ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಪೂರ್ಣವಾಗಲು ಇನ್ನೂ ಸಮಯ ಹಿಡಿಯುವುದರಿಂದ ಶಾಸಕರೂ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು.
ಸಮಿತಿಯಿಂದ ದೂರು- ಅಧಿಕಾರಿಗೆ ತರಾಟೆ: ಜಂಬೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಬಡಾವಣೆಯ ಶೌಚಾಲಯ ಗುಂಡಿಯ ಸಮಸ್ಯೆ, ಕಸದ ಸಮಸ್ಯೆ ಹಾಗೂ ಒಳಚರಂಡಿ ಸಮಸ್ಯೆ ಕುರಿತು ಬಡಾವಣೆಯ ಉಸ್ತುವಾರಿ ಸಮಿತಿ ಸದಸ್ಯರು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಸೆಳೆದರು.
ಸಮಸ್ಯೆಯನ್ನು ಆಲಿಸಿದ ಶಾಸಕರು ಕೂಡಲೇ ಬಡಾವಣೆಯ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು.
ಈ ಕುರಿತು ಜಿಲ್ಲಾಧಿಕಾರಿಗಳು ವಿವರಣೆ ಕೇಳುತ್ತಿದ್ದು, ಅವರಿಗೆ ವಿವರಣೆ ನೀಡುವಂತೆ ತರಾಟೆಗೆ ತೆಗೆದುಕೊಂಡರು.
ಶಾಸಕರಿಂದ ಫೋನನ್ನು ಪಡೆದುಕೊಂಡ ಜಿಲ್ಲಾಧಿಕಾರಿ ಡಾ. ಸತೀಶ್ ಅವರು, ಇಂಜಿನಿಯರ್ ಅವರನ್ನು ನೇರವಾಗಿ ಬಂದು ಮಾಹಿತಿ ನೀಡುವಂತೆ ಹೇಳಿದರಲ್ಲದೆ, ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭ ಕೆಲವು ನಿರಾಶ್ರಿತರು ತಮಗೂ ಮನೆ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.