ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ ಭವನದ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಪ್ರತಿಭಟನೆ ವೇಳೆ ಉಂಟಾದ ತಳ್ಳಾಟದಲ್ಲಿ ಬಿಜೆಪಿ ಸಂಸದರಿಬ್ಬರು ಗಾಯಗೊಂಡಿದ್ದು, ಇದೀಗ ರಾಜಕೀಯ ಗದ್ದಲ ಜೋರಾಗಿದೆ.
ಬಿಜೆಪಿ ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಬ್ಬರೂ ಸಂಸದರನ್ನು ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಮೋದಿ ಅವರು ಕರೆ ಮಾಡಿರುವುದನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಡಾ ಅಜಯ್ ಶುಕ್ಲಾ ಅವರು ದೃಢಪಡಿಸಿದರು, ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಇಬ್ಬರೂ ಸಂಸದರ ಸ್ಥಿತಿಯನ್ನು ವಿಚಾರಿಸಿದ್ದಾರೆ ಎಂದು ತಿಳಿಸಿದರು.
ಮೋದಿ ಅವರು ಸಂಸದರಿಬ್ಬರ ಜೊತೆ ಮಾತನಾಡಿದರು ಮತ್ತು ಚಿಂತಿಸಬೇಡಿ ಎಂದರು. ಅವರು ಈಗ ಉತ್ತಮವಾಗಿದ್ದಾರೆಂದು ತೋರುತ್ತಿದೆ, ಅವರ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು. ಒಡಿಶಾದ ಬಾಲಸೋರ್‌ನ ಬಿಜೆಪಿ ಸದಸ್ಯ 69 ವರ್ಷದ ಸಾರಂಗಿ ಅವರ ಹಣೆಯ ಎಡ ಭಾಗದ ಮೇಲೆ ಗಾಯಗಳಾಗಿವೆ. ನಂತರ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಂತರ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಅವರು ಆಸ್ಪತ್ರೆಗೆ ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ಮುಖೇಶ್ ರಜಪೂತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಡಾ ಶುಕ್ಲಾ ಹೇಳಿದ್ದಾರೆ. ನಂತರ ಅವರು ಪ್ರಜ್ಞೆಯನ್ನು ಪಡೆದರು ಆದರೆ ತಲೆತಿರುಗುವಿಕೆ ಮತ್ತು ಆತಂಕದಲ್ಲಿದ್ದರು, ಅವರ ರಕ್ತದೊತ್ತಡವೂ ಹೆಚ್ಚಿತ್ತು.
ನನಗೂ ಗಾಯ ಆಗಿದೆ ಎಂದ ಖರ್ಗೆ
ಇನ್ನು ಈ ಮಧ್ಯೆ ನನಗೂ ಗಾಯವಾಗಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸಂಸತ್ತಿನ ಆವರಣದಲ್ಲಿ ಬಿಜೆಪಿ ಸಂಸದರು ತಮ್ಮನ್ನು ದೈಹಿಕವಾಗಿ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.