ಹೊಸದಿಗಂತ ವರದಿ, ವಿಜಯನಗರ:
ವಕ್ಫ್ ಬೋರ್ಡ್ ನಿಂದ ಹಿಂದು,ಮುಸ್ಲಿo ಸಮಾಜಕ್ಕೆ ಅನ್ಯಾಯವಾಗಿದೆ. ವಕ್ಫ್ ಕಾಯ್ದೆ ರದ್ಧುಗೊಳಿಸಬೇಕೆಂದು ಆಗ್ರಹಿಸಿ ಜ.೪ ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೊಂದು ಪಕ್ಷಾತೀತ, ಜಾತ್ಯಾತೀತ ಹೋರಾಟವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಹೊಸಪೇಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಇತ್ತೀಚೆಗೆ ವಿವಿಧ ಜಿಲ್ಲೆಯ ರೈತಾಪಿ ಜನರು, ಸರ್ಕಾರಿ ಆಸ್ತಿ ಹಾಗೂ ದೇವಸ್ಥಾನಗಳನ್ನೂ ತನ್ನದೆಂದು ನೋಟಿಸ್ ನೀಡಿದೆ. ಇದು ಬಡ ರೈತರ ಜೀವನವನ್ನೇ ಬುಡ ಮೇಲಾಗಿಸಿದರೆ, ಧಾರ್ಮಿಕ ಸಂಸ್ಥೆಗಳ ಜಾಗವನ್ನು ತನ್ನದೆನ್ನುವುದರಿಂದ ಸಾಮಾಜಿಕ ಸಾಮರಸ್ಯವನ್ನು ಕೆಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಕ್ಫ್ ಧೋರಣೆಯನ್ನು ಖಂಡಿಸುವ ಜೊತೆಗೆ ವಕ್ಫ್ ಕಾಯ್ದೆಯ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ. ಜ.೪ ರಂದು ಬಳ್ಳಾರಿಯ ಕಂಪ್ಲಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆನಂತರವೂ ಬಳ್ಳಾರಿ- ವಿಜಯನಗರದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ನಮ್ಮದೊಂದೇ ಬಣ, ಅದು ಬಿಜೆಪಿ ಬಣ. ಯತ್ನಾಳ್ ಬಣ, ವಿಜಯೇಂದ್ರ ಬಣ ಎಂಬುದೆಲ್ಲವೂ ಮಾಧ್ಯಮಗಳ ಸೃಷ್ಟಿಯಷ್ಟೇ. ಆದರೆ, ವಕ್ಫ್ ವಿರುದ್ಧದ ಹೋರಾಟ ಪಕ್ಷತೀತವಾಗಿದ್ದು, ಸಮಾವೇಶಕ್ಕೆ ಮಾಜಿ ಸಚಿವ ಆನಂದ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಬರಲಿ, ಕಾಂಗ್ರೆಸ್ ನಾಯಕರೂ ಬರಲಿ. ವಕ್ಫ್ ಕಾಯ್ದೆ ಎಂಬುದು ಜನ ಸಾಮಾನ್ಯರಿಗೆ ಮರಣ ಶಾಸನವಿದ್ದಂತೆ. ಅದು ಸಂಪೂರ್ಣವಾಗಿ ರದ್ಧಾಗಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಶಾಸಕ ಮುನಿರತ್ನ ಪ್ರಕರಣಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ರಾಜಕಾರಣದಲ್ಲಿ ಎಲ್ಲವೂ ಎದುರಿಸಬೇಕು. ಈ ವಿಚಾರವಾಗಿ ಈಗಾಗಲೇ ಪಕ್ಷದ ವರಿಷ್ಠರು ಮಾತನಾಡಿದ್ದಾರೆ ಎಂದಷ್ಟೇ ಹೇಳಿದರು.