ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಹಿನ್ನೆಲೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ನೀಡುತ್ತಿದ್ದ ಲಿನಿನ್ (ಹಾಸು ಬಟ್ಟೆಗಳು), ಹೊದಿಕೆಗಳು ಮತ್ತು ಪರದೆಗಳ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಂಡಿದೆ. ಈ ಮೂಲಕ ಇನ್ಮುಂದೆ ಮೊದಲಿನಂತೆ ರೈಲು ಪ್ರಯಾಣಿಕರಿಗೆ ಎಲ್ಲಾ ಸೌಲಭ್ಯ ಸಿಗಲಿದೆ.
ಕೋವಿಡ್-19 ರ ಕಾರಣದಿಂದಾಗಿ ರೈಲುಗಳಲ್ಲಿ ಪ್ರಯಾಣಿಕರ ಚಲನೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ (ಎಸ್‌ಒಪಿ) ಅನ್ನು ಹೊರಡಿಸಲಾಗಿತ್ತು.ಇದು ರೈಲುಗಳ ಒಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಮೇಲೆ ನಿರ್ಬಂಧವನ್ನು ವಿಧಿಸಿತ್ತು.
ಇದೀಗ ರೈಲಿನೊಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಪೂರೈಕೆಗೆ ಸಂಬಂಧಿಸಿದಂತೆ ಮೇಲಿನ ನಿರ್ಬಂಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ರೈಲ್ವೆ ನಿರ್ಧರಿಸಿದೆ .
ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಕೂಡ ಕಳೆದ ತಿಂಗಳ 14 ರಿಂದ ಎಲ್ಲಾ ರೈಲುಗಳಲ್ಲಿ ಆಹಾರ ಸೇವೆ ಪುನರಾರಂಭಿಸಿದೆ. ರೈಲ್ವೆ ಮಂಡಳಿಯಿಂದ ಪಡೆದ ಮಾರ್ಗಸೂಚಿಗಳ ಪ್ರಕಾರ ಬೇಯಿಸಿದ ಆಹಾರ ಸೇವೆಯನ್ನು ಮರುಸ್ಥಾಪಿಸಲಾಗಿದೆ.
ಇದೀಗ ಕೊರೋನಾ ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆ ಹಂತ ಹಂತವಾಗಿ ಆಹಾರ ಸೇವೆಯನ್ನು ಪ್ರಾರಂಭಿಸಲಾಯಿತು. ಈಗಾಗಲೇ 428 ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ಮರುಸ್ಥಾಪಿಸಲಾಗಿದೆ ಮತ್ತು ಒಟ್ಟು ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ಕಳೆದ ವರ್ಷ ಡಿಸೆಂಬರ್ ವೇಳೆಗೆ 30 ಪ್ರತಿಶತ ಮತ್ತು ಈ ವರ್ಷದ ಜನವರಿಯಲ್ಲಿ 80 ಪ್ರತಿಶತದಷ್ಟು ಪುನಃಸ್ಥಾಪಿಸಲಾಗಿದೆ ಮತ್ತು ಉಳಿದ 20 ಪ್ರತಿಶತವನ್ನು ಕಳೆದ ತಿಂಗಳು ಪುನಃಸ್ಥಾಪಿಸಲಾಗಿದೆ.