ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರಾಡಳಿತ ಪುದುಚೇರಿಯ ಸಾರಿಗೆ ಸಚಿವೆ ಚಂದ್ರ ಪ್ರಿಯಾಂಕಾ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಸಾರಿಗೆ ವಲಯದಲ್ಲಿ ಸಾರ್ವಜನಿಕ ಸಾರಿಗೆ ಕ್ಷೇತ್ರವನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಅವರು ತಮ್ಮ ಅಧಿಕಾರವಧಿಯಲ್ಲಿ ಹಲವಾರು ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಸರುಗಳಿಸಿದ್ದರು.
ಚಂದ್ರ ಪ್ರಿಯಾಂಕಾ ಅವರು 2016ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 41 ವರ್ಷಗಳಲ್ಲೇ ಇವರು ಪುದುಚೇರಿಯ ಮೊದಲ ಮಹಿಳಾ ಸಚಿವರೆನಿಸಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ ಕ್ಷೇತ್ರದ ಜನರ ಕ್ಷಮೆ ಕೇಳಿರುವ ಅವರು ರಾಜಕೀಯದ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಸಚಿವೆಯ ರಾಜೀನಾಮೆ ಪುದುಚೇರಿ ಸರ್ಕಾರದ ರಾಜಕೀಯ ಸ್ಥಿರತೆ ಬಗ್ಗೆಯೂ ಚಿಂತಿಸುವಂತೆ ಮಾಡಿದೆ. ಅಲ್ಲದೇ ರಾಜೀನಾಮೆ ನಂತರ ಪುದುಚೇರಿ ಸರ್ಕಾರದ ಸಂಪುಟದಲ್ಲಿ ಮಹತ್ವದ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನು ಮುಂದೆ ಕುತಂತ್ರ ರಾಜಕಾರಣದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಇದಕ್ಕಾಗಿ ಕ್ಷೇತ್ರದ ಜನರ ಕ್ಷಮೆ ಕೇಳುವೆ. ಸಮಾಜದ ಕಟ್ಟಕಡೆಯ ಮಹಿಳೆಯರು ರಾಜಕೀಯಕ್ಕೆ ಬಂದರೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಮಾತಿದೆ. ಆದಾಗ್ಯೂ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜನರಿಗಾಗಿ ಹಗಲಿರುಳು ದುಡಿದಿದ್ದೇನೆ . ಜನರ ನೀಡಿದ ಶಕ್ತಿಯಿಂದ ರಾಜಕೀಯಕ್ಕೆ ಬಂದರೂ, ಕುತಂತ್ರ ರಾಜಕಾರಣದಲ್ಲಿ ಮತ್ತು ಹಣದ ಮಹಾಭೂತದ ಮುಂದೆ ಹೋರಾಡುವುದು ಅಷ್ಟು ಸುಲಭವಲ್ಲ ಎಂಬುದನ್ನು ನಾನಿಲ್ಲಿ ಅರಿತುಕೊಂಡೆ. ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ (Resignation Letter) ತಿಳಿಸಿದ್ದಾರೆ.ಆದ್ರೆ ಪ್ರಿಯಾಂಕಾ ರಾಜೀನಾಮೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ,